ಕರ್ನಾಟಕ ಉತ್ತರ ಹಾಗು ದಕ್ಷಿಣ ಕರ್ನಾಟಕ ಎಂದು ಕರೆಸಿಕೊಂಡರೂ ಎಲ್ಲರೂ ಮಾತನಾಡುವುದು ಕನ್ನಡ ಭಾಷೆ. ಕನ್ನಡ ಎಂದರೆ ಇಡೀ ಕರುನಾಡಿನ ಸಮಸ್ತ ಜನರಿಗೂ ಎಲ್ಲಿಲ್ಲದ ಪ್ರೀತಿ. ಆದರೆ ಇದೀಗ ರಾಜ್ಯ ಸರ್ಕಾರ ಮಾಡುತ್ತಿರುವ ಕೆಲಸ ಕರ್ನಾಟಕವನ್ನು ಇಬ್ಭಾಗ ಮಾಡುವ ಕೆಲಸಕ್ಕೆ ಮುನ್ನಡಿ ಬರೆದಂತೆ ಆಗಿದೆ. ರಾಜ್ಯ ಸರ್ಕಾರ ಮತಬ್ಯಾಂಕ್ ಹಿಡಿತದಲ್ಲಿ ಇಟ್ಟುಕೊಳ್ಳಲು ತೆಗೆದುಕೊಳ್ಳುತ್ತಿರುವ ನಿರ್ಧಾರ, ಇಂದಲ್ಲ ನಾಳೆ ಕರ್ನಾಟಕ ಭೂಪಟ ಹರಿದು ಹಂಚುವ ಹಂತಕ್ಕೆ ತಂದು ನಿಲ್ಲಿಸುವ ಆತಂಕವನ್ನು ಎದುರು ನೋಡುವಂತೆ ಮಾಡುತ್ತಿದೆ. ತುಳು ಭಾಷೆ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಒಂದು ವಾರದಲ್ಲಿ ವರದಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಆದೇಶ ಹೊರಡಿಸಿದ್ದಾರೆ. ಈ ಆತುರದ ನಿರ್ಧಾರ ಮುಂದಿನ ದಿನಗಳಲ್ಲಿ ಕನ್ನಡ ಹಾಗು ಭಾಷಾ ಸಾರ್ವಭೌಮತೆಗೆ ಧಕ್ಕೆ ತರುವ ಆತಂಕ ಕಾಣಿಸುತ್ತಿದೆ.
ಕರುನಾಡಿನಲ್ಲಿ ತುಳುವಿಗೆ 2ನೇ ಭಾಷೆ ಮಾನ್ಯತೆ..!?
ದಕ್ಷಿಣ ಕನ್ನಡ ಹಾಗು ಉಡುಪಿಯ ಅರ್ಧ ಭಾಗ, ಮಲೆನಾಡಿನ ಒಂದಿಷ್ಟು ಜನರು ಮಾತನಾಡುವ ತುಳು ಭಾಷೆಯನ್ನು ಕರ್ನಾಟಕದ 2ನೇ ಅಧಿಕೃತ ಭಾಷೆ ಎಂದು ಘೋಷಣೆ ಮಾಡುವ ಹುನ್ನಾರ ನಡೆಸಲಾಗಿದೆ. ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡಲು ತಜ್ಞರ ಸಮಿತಿ ರಚನೆ ಮಾಡಿರುವ ಸರ್ಕಾರ, ತುಳು ಭಾಷಿಕರ ಮತಗಳಿಗಾಗಿ ಈ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಚರ್ಚೆಗಳು ಶುರುವಾಗಿದೆ. ಡಾ.ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಾಜ್ಯ ಸರಕಾರ ರಚನೆ ಮಾಡಿದ್ದು, ಡಾ.ಕೇಶವ ಬಂಗೇರಾ, ಡಾ.ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿರಾಜ್ ಕವತ್ತಾರು ಮಣಿಪಾಲ, ವಸಂತ್ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಈ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇಷ್ಟೆಲ್ಲಾ ಮಾಡಿರುವ ಸರ್ಕಾರ ಚುನಾವಣೆಗೂ ಮುನ್ನವೇ 2 ಭಾಷೆ ಮಾನ್ಯತೆ ಕೊಟ್ಟು ಮತ ಸೆಳೆಯುವ ಸಂಚು ರೂಪಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ತುಳು ಭಾಷೆಗೆ ಮಾನ್ಯತೆ ಕೊಟ್ಟಾಗ ನಷ್ಟವೇನು..?
ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ನವೆಂಬರ್ ತಿಂಗಳಲ್ಲಿ ಕನ್ನಡವನ್ನು ಜನರು ಆರಾಧಿಸ್ತಾರೆ. ಆದರೆ ಕರಾವಳಿ ಭಾಗದಲ್ಲಿ ಕನ್ನಡದ ಮೇಲಿನ ಪ್ರೀತಿ, ವ್ಯಾಮೋಹ ಅಷ್ಟಾಗಿ ಕಾಣಿಸುವುದಿಲ್ಲ. ಅವರು ತುಳುವನ್ನೇ ಮಾತನಾಡ್ತಾರೆ. ತುಳುವಿನಲ್ಲೇ ವ್ಯವಹಾರ ಮಾಡುತ್ತಾರೆ. ಒಮ್ಮೆ ತುಳು ಭಾಷೆಗೆ ಸರ್ಕಾರ ಮಾನ್ಯತೆ ಕೊಟ್ಟ ಬಳಿಕ ತುಳುವಿನಲ್ಲಿ ಶಿಕ್ಷಣ ಆರಂಭ ಮಾಡಬೇಕು ಎನ್ನುವ ಹೋರಾಟ ಶುರುವಾಗುತ್ತೆ. ಆ ಬಳಿಕ ಕರಾವಳಿ ಭಾಗಕ್ಕೆ ಬರುವ ಬಸ್ಗಳಲ್ಲಿ ತುಳುವಿನಲ್ಲಿ ಬೋರ್ಡ್ ಹಾಕಬೇಕು ಎನ್ನುವ ಆಗ್ರಹ ಕೇಳಿಬರುವುದು ಸಹಜ. ಇನ್ನು ತುಳು ಭಾಷಿಕರನ್ನು ಕಡೆಗಣಿಸಲಾಗ್ತಿದೆ ಎನ್ನುವ ಹೋರಾಟಗಳು ಶುರುವಾಗಬಹುದು. ರಾಜ್ಯ ವಿಧಾನಸಭೆಯಲ್ಲಿ ತುಳು ಭಾಷೆಯಲ್ಲೇ ಚರ್ಚೆ ಶುರು ಮಾಡಬಹುದು. ಈ ರೀತಿ ಒಂದಲ್ಲ ಒಂದು ಬಗೆಯ ಸಮಸ್ಯೆಗೆ ಸರ್ಕಾರವೇ ಮುಹೂರ್ತ ಇಟ್ಟಂತೆ ಭಾಷವಾಗ್ತಿದೆ.

ರಾಜ್ಯಗಳ ವಿಭಜನೆ ಹೋರಾಟಕ್ಕೆ ಶಕ್ತಿ ಬರಬಹುದು..!
ಮಹಾರಾಷ್ಟ್ರ ಹಾಗು ಕರ್ನಾಟಕದ ನಡುವೆ ಗಡಿ ವಿವಾದ ಸಾಕಷ್ಟು ವರ್ಷಗಳಿಂದ ನಡೆಯುತ್ತಿದ್ದು, ಇದೀಗ ತುಳುನಾಡು ಕಾಸರಗೋಡನ್ನು ಜೊತೆಗೆ ಸೇರಿಕೊಂಡು ಪ್ರತ್ಯೇಕ ರಾಜ್ಯ ಕೇಳುವುದಕ್ಕೆ ಕರ್ನಾಟಕ ಸರ್ಕಾರವೇ ದಾರಿ ಮಾಡಿಕೊಟ್ಟಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಉಳಿದ ಭಾಷೆಗಳಿಗೆ ಗೌರವ ಕೊಡೋಣ, ಪ್ರೀತಿಸೋಣ, ಆದರೆ ಕರ್ನಾಟಕದಲ್ಲಿ ಕನ್ನಡ ಮಾತ್ರವೇ ಶಶಕ್ತವಾಗಿದ್ದಾಗ ಮಾತ್ರವೇ ಕರುನಾಡು ಒಂದು ಅಖಂಡ ರಾಜ್ಯವಾಗಿ ಉಳಿಯಬಹುದಾಗಿದೆ. ಇಲ್ಲದಿದ್ದರೆ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಹಲವಾರು ಸಂಘ-ಸಂಸ್ಥೆಗಳು, ಸಾರ್ವಜನಿಕರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದ ಮಾತ್ರ ಸರ್ಕಾರ ಅರೆಬಿರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎನ್ನಬಹುದು.