ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಹಗರಣ ಇನ್ನು ಒಂದೆರಡು ದಿನಗಳಲ್ಲಿ ಮಹತ್ವದ ತಿರುವು ಪಡೆಯುವ ಸಾಧ್ಯತೆಗಳಿವೆ.
ಅದರಲ್ಲೂ ಆಡಳಿತ ಸರ್ಕಾರ ಮತ್ತು ಆಡಳಿತ ಪಕ್ಷದ ಚುಕ್ಕಾಣಿ ಹಿಡಿದ ಇಬ್ಬರು ಪ್ರಮುಖರ ಹೆಸರು, ಈ ಬಹುಕೋಟಿ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಜೊತೆ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ.
ಸರ್ಕಾರ ಮತ್ತು ಆಡಳಿತ ಪಕ್ಷದ ಸೂತ್ರಧಾರರೇ ಹಗರಣದ ರೂವಾರಿಗಳು, ವಾಸ್ತವವಾಗಿ ಪ್ರಮುಖ ಅರೋಪಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿಯೇ ತನಿಖಾಧಿಕಾರಿಗಳ ಮುಂದೆ ಈ ಬೆಚ್ಚಿಬೀಳಿಸುವ ಹೇಳಿಕೆ ನೀಡಿದ್ದು, ಆ ಇಬ್ಬರು ಸೂತ್ರಧಾರರೇ ತನ್ನನ್ನು ಬಳಸಿಕೊಂಡು ಸಾವಿರಾರು ಕೋಟಿ ಮೊತ್ತದ ಬಿಟ್ ಕಾಯಿನ್ ವಹಿವಾಟು ನಡೆಸಿದ್ದಾರೆ ಎಂದು ಆತ ಹೇಳಿದ್ದಾನೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪ್ರಕರಣ ಮಹತ್ವ ಪಡೆದುಕೊಂಡಿದೆ.
ಈ ನಡುವೆ ಪ್ರಕರಣ ಅಂತಹ ಗಂಭೀರತೆಯ ಹಿನ್ನೆಲೆಯಲ್ಲೇ ಪ್ರತಿಪಕ್ಷ ನಾಯಕರು ಆ ಕುರಿತ ತನ್ನ ವಾಗ್ದಾಳಿ ಮತ್ತು ಸರಣಿ ಸವಾಲುಗಳನ್ನು ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಯಾವ ಪಕ್ಷದವರೇ ಇರಲಿ ಅವರ ಹೆಸರುಗಳನ್ನು ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒತ್ತಾಯಿಸಿದ್ದರೆ, ಹಗರಣದ ಕುರಿತ ಮಹತ್ವದ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಪಕ್ಷ ನಾಯಕರು ಸೋಮವಾರ ಹಗರಣದ ಕುರಿತ ಮಹತ್ತರವಾದ ದಾಖಲೆ ಬಿಡುಗಡೆ ಮಾಡಲಿದ್ದು, ಆ ಬಳಿಕ ಪ್ರಕರಣ ತೆಗೆದುಕೊಳ್ಳಲಿರುವ ತಿರುವು ಕುತೂಹಲ ಮೂಡಿಸಿದೆ.
ಈ ನಡುವೆ ಸರ್ಕಾರ ಕೂಡ ಸಿಸಿಬಿ ನಡೆಸಿದ ತನಿಖೆಯ ಮಾಹಿತಿಯಲ್ಲಿ ರಾಜಕಾರಣಿಗಳಿಗೆ ಸಂಬಂಧಿಸಿದ ವಿವರ, ಒಟ್ಟು ವಹಿವಾಟಿನ ಮಾಹಿತಿ, ಹ್ಯಾಕ್ ಮಾಡಿ ನಡೆಸಿದ ಆ ವಹಿವಾಟಿನ ಫಲಾನುಭವಿಗಳು ಯಾರು? ಆ ಫಲಾನುಭವಿಗಳಿಗೂ ಪ್ರಮುಖ ಆರೋಪಿ ಶ್ರೀಕಿಗೂ ಇರುವ ನಂಟು ಏನು, ಯಾವೆಲ್ಲಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಮತ್ತು ಹಾಗೆ ಹ್ಯಾಕ್ ಮಾಡಿ ದೋಚಿದ ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ಗಳನ್ನು ಯಾರ ಖಾತೆಗಳಿಗೆ ಜಮಾ ಆಗಿವೆ? ಹಾಗೇ ಹ್ಯಾಕರ್ ಶ್ರೀಕಿ ಸರ್ಕಾರದ ಯಾವೆಲ್ಲಾ ಖಾತೆಗಳಿಂದ ಎಷ್ಟು ಹಣ ಹ್ಯಾಕ್ ಮಾಡಿದ್ದಾನೆ ಮತ್ತು ಹಾಗೆ ದೋಚಿದ ಸಾರ್ವಜನಿಕ ಹಣ ಈಗ ಏನಾಗಿದೆ? ಆ ಹಣ ವಾಪಸ್ ಪಡೆಯಲಾಗಿದೆಯೇ ? ಅಥವಾ ತನಿಖಾಧಿಕಾರಿಗಳಿಗೆ ಸಂಪೂರ್ಣ ವಹಿವಾಟು ಜಾಡು ಸಿಕ್ಕೇ ಇಲ್ಲವೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ಮೂಕಸಾಕ್ಷಿಯಾಗಿದ್ದು, ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಮುಂದಾಗಿಲ್ಲ.
ಸರ್ಕಾರದ ಇಂತಹ ನಡೆ ಕೂಡ ಪ್ರತಿಪಕ್ಷಗಳ ಅರೋಪಗಳಿಗೆ ಪುಷ್ಟಿ ನೀಡುತ್ತಿದ್ಸು, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆ ಹಿನ್ನೆಲೆಯಲ್ಲಿ ಹಗರಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರ ಪಾತ್ರದ ಕುರಿತು ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಮುಖ್ಯವಾಗಿ ಬಿಜೆಪಿ ಸರ್ಕಾರ ತನ್ನ ನಾಯಕ ಮೋದಿಯವರು ಹೇಳುವಂತೆ “ನಾ ಖಾವೂಂಗಾ, ಖಾನೆದೂಂಗಾ…” ಎಂಬುದನ್ನು ನಿಜವಾಗಿಯೂ ಪಾಲಿಸುವುದೇ ಆದರೆ ಈ ಹತ್ತಾರು ಸಾವಿರ ಕೋಟಿ ರುಪಾಯಿ ಹಗರಣ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಹಗರಣ ವಿಷಯದ, ತನಿಖೆಯಲ್ಲಿ ಕಂಡುಬಂದ ಮಾಹಿತಿ, ಬಳಿಕ ಎಫ್ ಬಿಐ ಮತ್ತಿತರ ವಿದೇಶಿ ತನಿಖಾ ಸಂಸ್ಥೆಗಳು ಕೇಳಿದ ಮಾಹಿತಿ, ಸಿಬಿಐ ಇಂಟರ್ ಪೋಲ್ ಕೋರಿದ ಮಾಹಿತಿ, ಇಡಿ ತನಿಖೆಗೆ ವಹಿಸುವ ಪ್ರಸ್ತಾಪ, ಆರೋಪಿ ಶ್ರೀಕಿಯ ಹಿನ್ನೆಲೆ, ಆತನ ಕುಟುಂಬ ಹೊಂದಿರುವ ರಾಜಕಾರಣಿಗಳ ನಂಟು ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದೇ ಮುಚ್ಚಿಡುತ್ತಿದೆ.
ಹಾಗೇ ಆರೋಪಿ ಶ್ರೀಕಿ ಜನ್ ಧನ್ ಖಾತೆಯ ಖಾತೆಗಳೂ ಸೇರಿದಂತೆ ಸರ್ಕಾರದ ವಿವಿಧ ಹಣಕಾಸು ವಹಿವಾಟಿನ ಖಾತೆಗಳನ್ನೂ ಹ್ಯಾಕ್ ಮಾಡಿ ದೋಚಿದ ಸಾರ್ವಜನಿಕ ಹಣದ ಕುರಿತ ಮಾಹಿತಿಯನ್ನು ಕೂಡ ಸರ್ಕಾರ ಮುಚ್ಚಿಡುತ್ತಿರುವುದು ಯಾಕೆ? ಎಷ್ಟು ಮೊತ್ತದ ಹಣವನ್ನು ಯಾವೆಲ್ಲಾ ಸರ್ಕಾರಿ ಖಾತೆಗಳಿಂದ ದೋಚಲಾಗಿದೆ? ಹಾಗೆ ದೋಚಿದ ಹಣವನ್ನು ಶ್ರೀಕಿ ಯಾರೆಲ್ಲಾ ಖಾತೆಗೆ ವರ್ಗಾಯಿಸಿದ್ದಾನೆ? ಹಾಗೆ ಶ್ರೀಕಿಯಿಂದ ಹಣ ಮತ್ತು ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಂಡ ವಂಚಕರು ಯಾರು? ಅವರಿಗೂ ಶ್ರೀಕಿಗು ಇರುವ ಸಂಬಂಧವೇನು? ಎಂಬ ಮಾಹಿತಿಯನ್ನು ಸರ್ಕಾರ ಯಾಕೆ ಮುಚ್ಚಿಡುತ್ತಿದೆ?
ಡಿಜಿಟಲ್ ಇಂಡಿಯಾದ ಘೋಷಣೆ ಮೂಲಕ ದೇಶದಲ್ಲಿ ಚಲಾವಣೆಯಲ್ಲಿದ್ದ 14 ಲಕ್ಷ ಕೋಟಿ ಮೊತ್ತದ ನೋಟುಗಳನ್ನು ಏಕಾಏಕಿ ರದ್ದು ಮಾಡಿ, ದೇಶದ ಕೋಟ್ಯಂತರ ಜನರನ್ನು ರಾತ್ರೋರಾತ್ರಿ ಸಂಕಷ್ಟಕ್ಕೆ ತಳ್ಳಿದ ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಎಷ್ಟು ಸುರಕ್ಷಿತ ಎಂಬುದನ್ನೂ ಈ ಬಹುಕೋಟಿ ಹಗರಣ ಬಯಲುಮಾಡಿದೆ. ಹಾಗಾಗಿ ಅಂತಿಮವಾಗಿ ಈ ಹಗರಣದಲ್ಲಿ ಒಂದು ಕಡೆ ಬಿಜೆಪಿಯ ರಾಜ್ಯ ಸರ್ಕಾರ ಮತ್ತು ಪಕ್ಷದ ಸೂತ್ರಧಾರರ ಹೆಸರುಗಳು ತಳಕು ಹಾಕಿಕೊಂಡಿದ್ದರೆ, ಮತ್ತೊಂದು ಕಡೆ ಪ್ರಧಾನಿ ಮೋದಿಯವರ ಟಿಜಿಟಲ್ ಇಂಡಿಯಾ ಎಂಬ ಘೋಷಣೆಯನ್ನು ನಗೆಪಾಟಲಿಗೆ ಈಡು ಮಾಡಿದೆ.
ಹಾಗಾಗಿ, ಈ ಹಗರಣದ ವಿಷಯದಲ್ಲಿ ರಾಜ್ಯ ಬಿಜೆಪಿಯ ಇಬ್ಬರು ಪ್ರಮುಖರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜನರಿಗೆ ಉತ್ತರದಾಯಿಗಳಾಗಿ ವಾಸ್ತವಾಂಶವನ್ನು ಬಹಿರಂಗಪಡಿಸುವುದು ಬಿಜೆಪಿ ಸರ್ಕಾರದ ಹೊಣೆ. ಹಾಗೇ ಜನ್ ಧನ್ ಖಾತೆ ಸೇರಿದಂತೆ ವಿವಿಧ ಸರ್ಕಾರಿ ಖಾತೆಗಳಿಂದಲೇ ಹಣ ದೋಚಿದ ಹಿನ್ನೆಲೆಯಲ್ಲಿ ಡಿಜಿಟಲ್ ಇಂಡಿಯಾ ಘೋಷಣೆಯ ಸೂತ್ರಧಾರರು ಕೂಡ ನೈತಿಕ ಹೊಣೆ ಹೊರಬೇಕಿದೆ. ಸಾರ್ವಜನಿಕ ಹಣದ ಸುರಕ್ಷತೆಗೆ ಡಿಜಿಟಲ್ ಇಂಡಿಯಾದ ಕೊಡುಗೆ ಬಗ್ಗೆ ಮಾಹಿತಿ ನೀಡಬೇಕಿದೆ.