ದೇಶದ 13 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಉಪಚುನಾವಣೆಗಳು ನಡೆದಾಗ ಆಡಳಿತರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಸಾಮಾನ್ಯ. ಆದರೆ, ಆಡಳಿತ ವಿರೋಧಿ ಅಲೆಯ ಮುನ್ಸೂಚನೆ ಕೂಡಾ ಈ ಉಪಚುನಾವಣೆಗಳು ನೀಡುತ್ತವೆ. ಅದರಲ್ಲಿಯೂ ಬರುವ ವರ್ಷವೇ ಸಾರ್ವತ್ರಿಕ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಉಪಚುನಾವಣೆಯ ಫಲಿತಾಂಶ ಸಾಕಷ್ಟು ಮಹತ್ವವನ್ನು ಪಡೆಯುತ್ತದೆ.
ಹಿಮಾಚಲ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ನಿನ್ನೆ ಬಂದಿರುವ ಉಪಚುನಾವಣೆ ಫಲಿತಾಂಶದಲ್ಲಿ, ಆಡಳಿaತರೂಢ ಬಿಜೆಪಿಗೆ ಹೀನಾಯ ಸೋಲುಂಡಾಗಿದೆ. ಚುನಾವಣೆ ನಡೆದ ಮೂರೂ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ಬೀಗಿದೆ. ಪಶ್ಚಿಮ ಬಂಗಾಳದಲ್ಲಿಯಂತೂ ಬಿಜೆಪಿಗೆ ನೇರವಾದ ತಿರಸ್ಕಾರ ಲಭಿಸಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ. ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿಗೆ ಮುಖಭಂಗವಾಗುವಂತೆ ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಮಿಶ್ರಫಲ. ತನ್ನ ಸ್ವಾಧೀನದಲ್ಲಿದ್ದ ಕ್ಷೇತ್ರವನ್ನು ಕಳೆದುಕೊಂಡು, ಜೆಡಿಎಸ್ ಬಳಿಯಿದ್ದ ಕ್ಷೇತ್ರವನ್ನು ತನ್ನದಾಗಿಸಿದೆ. ಎರಡೂ ಕ್ಷೇತ್ರಗಳಲ್ಲಿ ಸೋಲುಂಡಿದ್ದ ಕಾಂಗ್ರೆಸ್, ಈಗ ಒಂದನ್ನು ಗೆದ್ದು ಬೀಗಿದೆ. ಇನ್ನೊಂದೆಡೆ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಮತ್ತು ಮಿತ್ರಪಕ್ಷಗಳು ಭರ್ಜರಿ ಜಯ ಸಾಧಿಸಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಪಾರಮ್ಯ ಮೆರೆದಿದೆ. ಗೆದ್ದ ಐದು ಕ್ಷೇತ್ರಗಳಲ್ಲಿ ನಾಲ್ಕು ವಿಪಕ್ಷಗಳ ತೆಕ್ಕೆಯಲ್ಲಿದ್ದ ಕ್ಷೇತ್ರಗಳಾಗಿದ್ದವು ಎಂಬುದು ಗಮನಾರ್ಹ ಸಂಗತಿ. ತೆಲಂಗಾಣದಲ್ಲಿ ಆಡಳಿತರೂಢ ಟಿಆರ್ಎಸ್ ಪಕ್ಷದ ಅಭ್ಯರ್ಥಿಯನ್ನು 23855 ಮತಗಳ ಅಂತರದಿಂದ ಬಿಜೆಪಿ ಮಣಿಸಿದೆ.
ಹೀಗೆ ಎಲ್ಲಾ ಉಪಚುನಾವಣೆಗಳ ಫಲಿತಾಂಶವನ್ನು ಗಮನಿಸಿದರೆ, ಕಾಂಗ್ರೆಸ್ ಎಂಟು, ಬಿಜೆಪಿ ಏಳು ಹಾಗೂ ಟಿಎಂಸಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಮೂರು ಸ್ಥಾನಗಳಲ್ಲಿವೆ. ಬಿಜೆಪಿಯ ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ದೇಶಾದ್ಯಂತ ಮತ್ತೆ ಚಿಗುರೊಡೆಯುವ ಲಕ್ಷಣಗಳು ಕಾಣುತ್ತಿವೆ.
ಈ ಉಪಚುನಾವಣೆ ಗೆಲುವು ಕಾಂಗ್ರೆಸ್ ಪಾಳೆಯದ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಮಧ್ಯಪ್ರದೇಶದ ಮೂರು ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರವನ್ನು ಗೆಲ್ಲಲು ಮಾತ್ರ ಕಾಂಗ್ರೆಸ್ ಶಕ್ತವಾದರೂ,45.5% ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಪಾಲಿಗೆ ಸಕಾರಾತ್ಮಕ ಅಂಶವಾಗಿದೆ. ಮಹಾರಾಷ್ಟ್ರದ ದೆಗ್ಲೂರ್ ಕ್ಷೇತ್ರವನ್ನು 42,000 ಮತಗಳ ಅಂತರದಿಂದ ಕಾಂಗ್ರೆಸ್ ಜಯಿಸಿದೆ. ಬಿಜೆಪಿಯ ದೇವೇಂದ್ರ ಫಡ್ನವಿಸ್ ದೆಗ್ಲೂರಿನಲ್ಲಿ ಅವಿರತವಾಗಿ ಪ್ರಚಾರ ನಡೆಸಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ.
ಕರ್ನಾಟಕದ ಹಾನಗಲ್’ನಲ್ಲಿ ಸಿಎಂ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಜಯಭೇರಿ ಭಾರಿಸಿದೆ.ರಾಜಸ್ಥಾನದಲ್ಲಿ ವಲ್ಲಭನಗರ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ, ಬಿಜೆಪಿ ತೆಕ್ಕೆಯಲ್ಲಿದ್ದ ಧಾರಿಯಾವಾಡವನ್ನು ಕೂಡಾ ತನ್ನ ತೆಕ್ಕೆಗೆ ಸೆಳೆದಿದೆ. ವಲ್ಲಭನಗರದಲ್ಲಿ ಬಿಜೆಪಿಗೆ ನಾಲ್ಕನೇ ಸ್ಥಾನ ದಕ್ಕಿದ್ದರೆ, ಧಾರಿಯಾವಾಡದಲ್ಲಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿರುವ ಮೂರು ಸೀಟುಗಳು ಮುಂಬರುವ ಸಾರ್ವತ್ರಿಕ ಚುನಾವಣೆಯ ಕುರಿತು ಬಿಜೆಪಿಗೆ ತಲೆನೋವು ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ.
ಇವೆಲ್ಲಾ ಲೆಕ್ಕಾಚಾರವನ್ನು ಹೊರತುಪಡಿಸಿ, ಒಟ್ಟು ಗಳಿಸಿದ್ದೆಷ್ಟು ಕಳೆದುಕೊಂಡಿದ್ದೆಷ್ಟು ಎಂಬುದನ್ನು ಗಮನಿಸಿದರೆ, ಅಸ್ಸಾಂನಲ್ಲಿನ ಭರ್ಜರಿ ಗೆಲುವಿನಿಂದ ಬಿಜೆಪಿ ಒಟ್ಟು ವಿಧಾನಸಭಾ ಸ್ಥಾನಗಳಲ್ಲಿ ಮೂರು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಿರ್ವಹಣೆ ಅತ್ಯುತ್ತಮವಾಗಿದ್ದರೂ, ಅದು ತನ್ನಲ್ಲಿದ್ದ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಳೆದುಕೊಂಡ ಮೂರು ಕ್ಷೇತ್ರಗಳಿಗಿಂತ ಗೆದ್ದುಕೊಂಡ ಎಂಟು ಕ್ಷೇತ್ರಗಳ ಕುರಿತಾಗಿ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ.
ಇನ್ನೊಂದು ಪ್ರಮುಖವಾದ ಹಾಗೂ ಗಮನಾರ್ಹ ಬೆಳವಣಿಗೆಯೇನೆಂದರೆ, ಆಡಳಿತವಿಲ್ಲದ ಕ್ಷೇತ್ರಗಳಲ್ಲಿ (ತೆಲಂಗಾಣ ಹೊರತುಪಡಿಸಿ) ಬಿಜೆಪಿಯ ಸಾಧನೆ ಹೇಳಿಕೊಳ್ಳುವ ಮಟ್ಟಕ್ಕಿಲ್ಲ. ಬಿಜೆಪಿಯ ಈ ಕಳಪೆ ನಿರ್ವಹಣೆ ಕಾಂಗ್ರೆಸ್ ಪಾಲಿಗೆ ನಿಜವಾದ ಗೆಲುವಾಗಿದೆ. ಹಿಮಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅನುಭವಿಸಿದ ಸೋಲು ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಕಂಡಿರುವ ಬೃಹತ್ ಸೋಲುಗಳಲ್ಲಿ ಒಂದಾಗಿದೆ.
ಸ್ಥಳೀಯ ಸಮಸ್ಯೆಗಳನ್ನು ಹಾಗೂ ಪ್ರಾದೇಶಿಕ ಸಂಸ್ಕೃತಿಯನ್ನು ಗುರುತಿಸಿ ಅದರ ಬೆಂಬಲಕ್ಕೆ ನಿಲ್ಲಲು ಬಿಜೆಪಿ ವಿಫಲವಾದದ್ದು ಈ ಸೋಲಿಗೆ ಕಾರಣ. ಮಿಗಿಲಾಗಿ, ತೈಲೋತ್ಪನ್ನಗಳ ದರ ಏರಿಕೆ, ಅಗತ್ಯ ವಸ್ತುಗಳ ದರ ಏರಿಕೆ, ನಿರುದ್ಯೋಗ, ಉದ್ಯಮಗಳ ನಷ್ಟ, ಕೋವಿಡ್ ಪರಿಸ್ಥಿತಿಯ ಅಸಮರ್ಪಕ ನಿರ್ವಹಣೆ ಕೂಡಾ ಬಿಜೆಪಿ ಸೋಲಿಗೆ ಕಾರಣವೆನ್ನಬಹುದು.
ಜಾಹಿರಾತುಗಳಲ್ಲಿ ಪರ್ವತದೆತ್ತರದ ಸಾಧನೆಗಳನ್ನು ತೋರಿಸುವ ಬಿಜೆಪಿಯ ಅಸಲಿ ಸಾಧನೆಗಳು ಜನರನ್ನು ತಲುಪದೇ ಇರುವುದು ಕೂಡಾ ಸೋಲಿಗೆ ಕಾರಣವಾಗಿದೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಲ್ಲ ಎಂಬುದನ್ನು ರಾಜಕಾರಣಿಗಳು ಹೇಳಿದರೂ, ಜನರ ಮನಸ್ಸಿನ ಭಾವನೆಯನ್ನು ಈ ಉಪಚುನಾವಣೆಗಳು ಬಹಿರಂಗಪಡಿಸುತ್ತವೆ ಎಂಬುದನ್ನು ಮರೆಯಬಾರದು.