ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆʼ ಎಂದು ಹೇಳಿದ್ದಾರೆ.
ʼಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ ಮತ್ತಿತರ ಶಾಸಕರು ದೆಹಲಿಗೆ ಹೋಗಿ ಬಂದು ಮಾಡುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಬಾಳುವುದಿಲ್ಲʼ ಎಂದಿದ್ದಾರೆ.
ಕೊರೊನಾ : ಬಿಗಿ ಕ್ರಮ ಅಗತ್ಯ :
ಕೊರೊನಾ ಮೂರನೇ ಅಲೆ ಆರಂಭವಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಲಾಕ್ಡೌನ್ ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಹೇಳಿದ್ದಾರೆ.
ಸರ್ಕಾರದ ಕ್ರಮಗಳ ಜೊತೆ ಜೊತೆಗೆ ಜನತೆಯೂ ಸಹ ಕೊರೊನಾ ಕುರಿತು ಎಚ್ಚರ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಎಲ್ಲಿರಿಗೂ ಲಸಿಕೆ ಕೊಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಕೇವಲ ಸಭೆಗಳನ್ನು ನಡೆಸುವುದರಿಂದ ಏನೂ ಆಗದು. ಜನರಿಗೆ ಲಸಿಕೆ ಕೊಡಿಸುವ ಕಾರ್ಯ ಮೊದಲ ಆಗಬೇಕು. ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ, ಕಾಲೇಜುಗಳನ್ನು ಆರಂಭಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳನ್ನು ನಾವೇ ತೊಂದರೆಗೆ ದೂಡಿದಂತೆ ಆಗುತ್ತದೆ ಎಂದಿದ್ದಾರೆ.
ಜನಜಂಗುಳಿ ಹೆಚ್ಚಾಗಿರುವ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡಬಾರದು. ಈ ಒಂದು ವರ್ಷ ಹಬ್ಬ ಹರಿದಿನ, ಜಾತ್ರೆಗಳನ್ನು ಮಾಡದಿರುವುದು ಉತ್ತಮ. ಮುಂದಿನ ತಿಂಗಳು ಗಣೇಶನ ಹಬ್ಬ. ಸಾಧ್ಯವಾದಷ್ಟು ಮನೆಗಳಲ್ಲಿಯೇ ಮೂರ್ತಿ ಕೂರಿಸಿ ಪೂಜಿಸಬೇಕು ಎಂದು ತಿಳಿಸಿದ್ದಾರೆ.
ಎಂಟಿಬಿ ಭೇಟಿಯಲ್ಲಿ ವಿಶೇಷವಿಲ್ಲ :
ನಾನು ಮತ್ತು ಸಚಿವ ಎಂಟಿಬಿ ನಾಗರಾಜ್ ನಿನ್ನೆ ಹೊಸಕೋಟೆಯಲ್ಲಿ ಭೇಟಿಯಾಗಿದ್ದುದು ನಿಜ. ಆದರೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಬಿಜೆಪಿಯವರ ಜೊತೆ ರಾಜಕೀಯ ಮಾತನಾಡುವುದೂ ಇಲ್ಲ. ಬಿಜೆಪಿಯವರು ಅಧಿಕಾರದಿಂದ ತೊಲಗಲಿ ಎಂದು ಹೇಳುವವನು ನಾನು. ಕನಕ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹೊಸಕೋಟೆಗೆ ಹೋಗಿದ್ದೆ. ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಊಟ ಇತ್ತು. ನಾಗರಾಜ್ ಸಹ ಅಲ್ಲಿಗೆ ಬಂದಿದ್ದರು ಅಷ್ಟೆ. ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ, ಶಾಸಕರಾದ ಬೈರತಿ ಸುರೇಶ್ ಶರತ್ ಬಚ್ಚೇಗೌಡ ಸಹ ಇದ್ದರು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈಶ್ವರಪ್ಪ ಆಸಕ್ತಿ ವಹಿಸಲಿ :
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಅಂದಿನ ಸಚಿವ ಪುಟ್ಟರಂಗ ಶೆಟ್ಟಿಯವರು ವರದಿ ಮಂಡನೆಗೆ ಮುಂದಾದಾಗ ಅವಕಾಶ ಕೊಡಲಿಲ್ಲ. ಈಗ ಈಶ್ವರಪ್ಪ ಅವರು ಸಚಿವರಾಗಿದ್ದಾರೆ. ಅವರು ವರದಿ ಸ್ವೀಕಾರ ಆಗುವಂತೆ ಮಾಡಲಿ. ರಾಯಣ್ಣ ಬ್ರಿಗೇಡ್, ಕುರುಬರ ಎಸ್ ಟಿ ಹೋರಾಟದ ಜೊತೆಗೆ ಈ ಕೆಲಸಕ್ಕೂ ಅವರು ಮುಂದಾಗಲಿ. ವರದಿ ಮಂಡನೆಗೆ ನಿರಾಕರಿಸಿದಾಗ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿ ಆಗಿರಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಆಗಿದ್ದೆ. ರಾಜಿನಾಮೆ ಪರಿಹಾರ ಎಂದಾಗಿದ್ದರೆ ಕೊಡುತ್ತಿದೆ. ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಅತಿ ಹಿಂದುಳಿದ ವರ್ಗಗಳ ವೇದಿಕೆ ಈಗ ವರದಿ ಸ್ವೀಕಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡುತ್ತಿದೆ. ಹೋರಾಟ ನಡೆಯಲಿ. ಬಳಿಕ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಹುತಾತ್ಮರಿಗೆ ನನ್ನ ನಮನ :
ನಮ್ಮ ದೇಶ ೭೫ನೇ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮದಲ್ಲಿದೆ. ನಾವೆಲ್ಲ ಸ್ವಾತಂತ್ರö್ಯದ ಫಲಾನುಭವಿಗಳಾಗಿದ್ದೇವೆ. ನಮ್ಮ ದೇಶವನ್ನು ಬ್ರಿಟಿಷರ ಸಂಕೋಲೆಯಿAದ ಬಿಡುಗಡೆ ಮಾಡಿಸಲು ಮಹಾತ್ಮ ಗಾಂಧಿ, ಸುಭಾಷ್ ಚಂದ್ರಭೋಸ್, ಸೇರಿದಂತೆ ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಈ ಹೋರಾಟದಲ್ಲಿ ಅನೇಕ ಮಂದಿ ಹುತಾತ್ಮರಾಗಿದ್ದಾರೆ.
ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರಲ್ಲಿ ಎಲ್ಲ ಜಾತಿ, ಜನಾಂಗದವರು, ಧರ್ಮದವರು ಇದ್ದರು. ಹೋರಾಟ ನಡೆಸಿದ ಎಲ್ಲಿರಿಗೂ ಈ ಸಂದರ್ಭದಲ್ಲಿ ನಾನು ನಮನಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಸ್ವಾರ್ಥಪರರಾಗಿರಲಿಲ್ಲ. ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ ನಿಸ್ವಾರ್ಥದಿಂದ ಹೋರಾಟ ಮಾಡಿದವರು ಅವರು ಎಂದು ಶ್ಲಾಘಿಸಿದ್ದಾರೆ.