ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ನೆಲೆಸಿರುವ ರಾಜ್ಯದ ವಿದ್ಯಾರ್ಥಿಗಳಿಗೂ ಆತಂಕ ತಂದೊಡ್ಡಿದ್ದು, ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕನಿಷ್ಠ ಹತ್ತು ಕರ್ನಾಟಕ ಮೂಲದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕನಿಷ್ಠ ಹತ್ತು ಕರ್ನಾಟಕ ಮೂಲದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ದೊಂದಿಗೆ ಸಂಪರ್ಕ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಗುರುವಾರ ಹೇಳಿದ್ದಾರೆ.
ಯುದ್ಧ ಆರಂಭವಾದಾಗ ಸುಮಾರು 100 ಭಾರತೀಯ ವಿದ್ಯಾರ್ಥಿಗಳು ಎರಡು ಬಸ್ಗಳಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಅವರಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಕರ್ನಾಟಕದವರು ಎಂಬುದು ನಮಗೆ ಸಿಕ್ಕಿರುವ ಮಾಹಿತಿ. ವಿದ್ಯಾರ್ಥಿಗಳನ್ನು ಉಕ್ರೇನ್ ನಲ್ಲಿ ಒಂದೊಂದು ಗುಂಪಾಗಿಸಿ ಬಿಡುತಿದ್ದಾರೆ. ಭಾರತಕ್ಕೆ ವಾಪಸಾಗಲು ಬಹುತೇಕ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಯುದ್ಧ ಆರಂಭವಾದ ಕಾರಣ ಅಲ್ಲೇ ಸಿಲುಕಿದ್ದಾರೆ ಎಂದಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯು ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ. ನಮ್ಮ ಮುಖ್ಯ ಕಾರ್ಯದರ್ಶಿ ಎಂಇಎ ಜೊತೆ ಸಂಪರ್ಕದಲ್ಲಿದ್ದಾರೆ. ರಾಯಭಾರಿ ಕಚೇರಿಯು ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಿದೆ. ವಿಮಾನಗಳು ಪುನರಾರಂಭಗೊಂಡ ನಂತರ, ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರದೊಂದಿಗೆ ಸಮನ್ವಯತೆಯೊಂದಿಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.