ಒಂದು ಕಡೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಿಂದ ಮುಕ್ತಗೊಳಿಸಲು ಕಾನೂನನ್ನು ಜಾರಿ ಮಾಡಲು ಬೊಮ್ಮಾಯಿ ಸರ್ಕಾರ ಚಿಂತಿಸುತ್ತಿದ್ದರೆ, ಇತ್ತ ದೇವಸ್ಥಾನಗಳಿಗೆ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಎಂದು ಸರ್ಕಾರಿ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಮತ್ತು ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಹಣಕಾಸಿನ ನಿಯಂತ್ರಣಕ್ಕೆ ಒಳಪಡದಂತೆ ಕಾನೂನನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದರು.
ಡಿಸೆಂಬರ್ 29ರಂದು ನಡೆದ ಸಭೆಯಲ್ಲಿ ದೇವಸ್ಥಾನದ ಹಣವನ್ನು ಬಳಸಲು ವಿವಿಧ ನೀತಿ ನಿಯಮಗಳನ್ನು ಈ ಹಿಂದೆ ಅಧಿಕಾರಿಗಳು ಪಾಲಿಸಬೇಕಿತ್ತು. ನಾವು ದೇವಸ್ಥಾನಗಳನ್ನು ಇನ್ಮುಂದೆ ಕಾನೂನಿನಿಂದ ಮುಕ್ತಗೊಳಿಸಲು ಯೋಚಿಸುತ್ತಿದ್ದೇವೆ. ದೇವಸ್ಥಾನಗಳು ಇನ್ಮುಂದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ನಮ್ಮ ಸರ್ಕಾರ ಮಾಡುತ್ತದೆ ಎಂದು ಸಭೆಯಲ್ಲಿ ಬೊಮ್ಮಾಯಿ ಸ್ಪಷ್ಟಪಡಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ಅಧಿನದಲ್ಲಿರುವ 34,563 ದೇವಸ್ಥಾನಗಳಿಗೆ 2020-21 ಅವಧಿಯಲ್ಲಿ ರಾಜ್ಯ ಸರ್ಕಾರ 465 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲಿ ಸರ್ಕಾರವು ದೇವಸ್ಥಾನಗಳಿಗೆ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದನ್ನು ತೋರಿಸುತ್ತದೆ.
ಅಂಕಿ-ಅಂಶಗಳ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2017-18ರ ಅವಧಿಯಲ್ಲಿ 447 ಕೋಟಿ ರೂಪಾಯಿ, 2018-19ರ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು 248 ಕೋಟಿ ರೂಪಾಯಿ, 2019-20ರ ಅವಧಿಯಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು 294 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಅನುದಾನವನ್ನ 465 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ದೇವಸ್ತಾನಗಳನ್ನು ಸರ್ಕಾರದ ಅಧೀನದಿಂದ ಮುಕ್ತಗೊಳಿಸುವ ಬಿಜೆಪಿ ಸರ್ಕಾರದ ಆಲೋಚನೆ ಹಿಂದೆ ಬೇರೆಯದ್ದೇ ಕುತಂತ್ರ ಅಡಗಿದೆ. ದೇವಸ್ಥಾನಗಳಿಂದ ಸಂಗ್ರಹವಾದ ಹಣವನ್ನ ಇತರೆ ಧರಾಮಿಕ ಸಂಸ್ಥೆಗಳ ನಿರ್ವಹಣೆಗಾಗಿ ಬಳಸಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಅವರು ಹರಿಹಾಯ್ದಿದ್ದಾರೆ.
ಇದು ಶೇ.80ರಷ್ಟು ಹಿಂದೂ ಸಮುದಾಯದ ಆಸ್ತಿಯನ್ನು ಕಬಳಿಸಿ ಅದನ್ನು ನಿರ್ದಿಷ್ಟವಾಗಿ ಎರಡು ಮೂರು ಸಮುದಾಯಗಳಿಗೆ ಹಂಚುವ ಸಂಚನ್ನು ರಾಜ್ಯ ಸರ್ಕಾರ ರೂಪಿಸಿದೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾದರೆ ರಾಜ್ಯದಲ್ಲಿ 1,000 ವರ್ಷಗಳ ಹಿಂದೆ ನಡೆದಿದ್ದ ಹೋರಾಟಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, “ಕಾಂಗ್ರೆಸ್ ನಾಯಕರು ಮೊಘಲ್ ದೊರೆ ಔರಂಗಜೇಬ್ ಮತ್ತು ಬ್ರಿಟಿಷರ ರೀತಿಯಲ್ಲಿ ದೇವಸ್ಥಾನಗಳಿಂದ ಬಂದ ಹಣವನ್ನು ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಭಕ್ತರು ದೇವಸ್ಥಾನಗಳಿಗೆ ನೀಡುವ ದೇಣಿಗೆಯನ್ನು ಸಾಮಾಜಿಕ ಉದ್ದೇಶಗಳಿಗಾಗಿ ಇನ್ಮುಂದೆ ಬಳಸಬೇಕು. ದೇವಸ್ಥಾನಗಳನ್ನು ಮುಖ್ಯಮಂತ್ರಿಗಳು ಮುಕ್ತಗೊಳಿಸುವ ಬಗ್ಗೆ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ,” ಎಂದಿದ್ದಾರೆ.
ಸರ್ಕಾರ ಅಂಕಿ-ಅಂಶಗಳ ಪ್ರಕಾರ ರಾಜ್ಯದ 205 ದೇವಾಲಯಗಳು ವಾರ್ಷಿಕ 25 ಲಕ್ಷ ರೂಪಾಯಿ ಆದಾಯ ತಂದು ಕೊಡುತ್ತವೆ. 139 ದೇವಸ್ಥಾನಗಳು ವಾರ್ಷಿಕ 10 ಲಕ್ಷ ರೂಪಾಯಿ ಮತ್ತು 34,219 ದೇವಾಲಯಗಳು ವಾರ್ಷಿಕ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಸರ್ಕಾರಕ್ಕೆ ನೀಡುತ್ತವೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳು ಕೋವಿಡ್ ಪೂರ್ವ ಸುಮಾರು 200 ಕೋಟಿ ರೂಪಾಯಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿತ್ತು. ಅದರಲ್ಲಿ ಶೇ.90 ರಷ್ಟು ದೊಡ್ಡ ದೊಡ್ಡ ದೇವಾಲಯಗಳ ಕೊಡುಗೆ ಹೆಚ್ಚಿತ್ತು.
ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997 ಪ್ರಕಾರ 5-10 ಲಕ್ಷ ಆದಾಯವಿರುವ ದೇವಸ್ಥಾನಗಳ ನಿರ್ವಹಣೆಗೆ ಹಣವನ್ನು ಬಳಸಲಾಗುತ್ತದೆ. ಖರ್ಚು ವೆಚ್ಚದ ಇತಿಮಿತಿಯನ್ನು ಸೆಕ್ಷೆನ್ 19ರ ಪ್ರಕಾರ ಪೂರ್ವಾನುಮತಿಯೊಂದಿಗೆ ಬಳಸಲಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಪ್ರತಿ ವರ್ಷ ಬಿಡುಗಡೆ ಮಾಡುವ ಹಣವನ್ನ ಸರ್ಕಾರದ ವಶದಲ್ಲಿರುವ ದೇವಾಲಯದ ಭೂಮಿ ಪರಿಹಾರಕ್ಕಾಗಿ, ದೇವಸ್ಥಾನಗಳ ಅಭಿವೃದ್ಧಿ ಮತ್ತು ತೀರ್ಥಯಾತ್ರೆಗೆ ಬಳಕೆಯಾಗುತ್ತಿದೆ.
ಕಳೆದ ತಿಂಗಳು ನಡೆದ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸಲು ರಾಜ್ಯ ಬಿಜೆಪಿ ಸರ್ಕಾರವು 125 ಕೋಟಿ ರೂಪಾಯಿ ಮಂಜೂರು ಮಾಡಿರುವುದಾಗಿ ಸದನದಲ್ಲಿ ಮಾಹಿತಿ ನೀಡಲಾಗಿತ್ತು. 2017-18ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 42 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು ಇಲ್ಲಿಯವರೆಗೂ ಗರಿಷ್ಠವಾಗಿತ್ತು. ಬಿಜೆಪಿ ಸರ್ಕಾರವು ವಿವಿಧ ಮಠಗಳ ಅಭಿವೃದ್ದಿಗೆ 127 ಕೋಟಿ ರೂಪಾಯಿಗಳ ಅನುದಾನವನ್ನ ಬಿಡುಗಡೆ ಮಾಡಿದೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಸರ್ಕಾರ ಅಧೀನದಿಂದ ಮುಕ್ತಗೊಳಿಸುವ ಬಗ್ಗೆ ಯೋಚನೆ ಮಾಡಿರುವುದು ಒಂದು ವರ್ಗದ ಜನರಿಗೆ ಖುಷಿ ನೀಡಿದೆ. ಇದು ನಾಳೆ ಯಾವ ಪರಿಣಾಮಗಳನ್ನು ಸೃಷ್ಟಿಸಲಿದೆ ಎಂಬುದನ್ನು ಕಾದುನೋಡಬೇಕು.