- ಅನಂತಕುಮಾರ್ ಹೇಳಿಕೊಟ್ಟ ತಂತ್ರವನ್ನು ಬಿಜೆಪಿ ಇಂದಿಗೂ ಪಾಲಿಸುತ್ತಿದೆ
ಚನ್ನಪಟ್ಟಣ, ನವೆಂಬರ್ 7, 2024: ನೂರು ಸುಳ್ಳು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪವನ್ನು ನಿಜ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಗುರುವಾರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮೂಡಾ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಪತ್ನಿಯ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಬಿಜೆಪಿಯವರು ನೂರು ಸುಳ್ಳು ಪೋಣಿಸಿದರೂ ಅದನ್ನು ಸತ್ಯ ಎಂದು ರುಜುವಾತು ಮಾಡಲಾಗದು,”ಎಂದು ಹೇಳಿದರು.
“ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ತಮ್ಮ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವ ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ಸ್ಪಷ್ಟನೆ ನೀಡಿದ್ದರೂ ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ನಡೆಸುತ್ತಿವೆ. ಇದರಲ್ಲಿ ಅವರು ಎಂದೂ ಸಫಲರಾಗುವುದಿಲ್ಲ. ಸತ್ಯ ಗೆಲ್ಲುತ್ತದೆ,”ಎಂದು ಅವರು ಹೇಳಿದರು.
“ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ಮೈಕ್ ಆನ್ ಇತ್ತು ಎಂಬ ವಿಷಯ ತಿಳಿಯದೇ, ಹೈ ಕಮಾಂಡ್‌ಗೆ ದುಡ್ಡು ಕಳುಹಿಸಿದ್ದೇವೆ. ಮತ್ತಷ್ಟು ಕಳುಹಿಸಬೇಕಿದೆ ಎಂಬ ಮಾತುಗಳನ್ನು ಆಡಿದ್ದರು. ಆಗ ಅನಂತಕುಮಾರ್ ಅವರು ಒಂದು ಸಲಹೆ ನೀಡಿದ್ದರು. ಸಗಣಿ ಮೇಲೆ ಒಂದು ಕಲ್ಲು ಬಿಸಾಡಿ, ಅದು ಎಲ್ಲರ ಮೇಲೆ ಎಗರುತ್ತದೆ. ಆಗ ಅದೇ ವಿಷಯ ಚಾಲ್ತಿಯಲ್ಲಿರುತ್ತದೆ ಎಂದಿದ್ದರು, ಅವರು ಅಂದು ಹೇಳಿಕೊಟ್ಟ ತಂತ್ರವನ್ನು ಬಿಜೆಪಿ ಇಂದಿಗೂ ಪಾಲಿಸುತ್ತಿದೆ. ತಮ್ಮ ಹುಳಕನ್ನು ಮುಚ್ಚಿಹಾಕಿಕೊಳ್ಳಲು ಬೇರೆಯವರ ಮೇಲೆ ಕೆಸರೆರಚುತ್ತಾರೆ. ಈ ತಂತ್ರ ಫಲಿಸದು,”ಎಂದು ಜಾರ್ಜ್ ಹೇಳಿದರು.
“ಇಂಥ ಯಾವ ಪೊಳ್ಳು ಆರೋಪಗಳು ಸಿದ್ದರಾಮಯ್ಯ ಅವರನ್ನು ಅಲುಗಾಡಿಸುವುದಿಲ್ಲ. ಇಂಥ ಕುತಂತ್ರಗಳಿಗೆ ನಾವು ಬಲಿಯಾಗಬಾರದು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಲು ಈ ಉಪ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಚನ್ನಪಟ್ಟಣದಲ್ಲಿ ನಮ್ಮ ಅಭ್ಯರ್ಥಿಗೆ ಜಯ ಖಚಿತ. ಯೋಗೇಶ್ವರ್ ನನ್ನ ಸ್ನೇಹಿತರು, ನೇರ ಮಾತಿನ ವ್ಯಕ್ತಿ, ಬಿಜೆಪಿಯವರಿಂದ ಮೋಸ ಹೋಗಿ ನಮ್ಮ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಇಲ್ಲಿ ಗೆದ್ದರೆ ರಾಜ್ಯಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಒಳಿತಾಗುವುದು,”ಎಂದು ತಿಳಿಸಿದರು.
ಕರ್ನಾಟಕದ ಆರ್ಥಿಕ ಮಾದರಿ ಯಶಸ್ವಿಯಾಗಿದೆ
“ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ನಾವು ಆರ್ಥಿಕವಾಗಿ ದಿವಾಳಿಯಾಗುತ್ತೇವೆ ಎಂಬ ಪ್ರತಿಪಕ್ಷಗಳ ದುರಾಲೋಚನೆ ಸುಳ್ಳಾಗಿದೆ. ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ. ಇತ್ತೀಚಿನ ವರದಿಯಿಂದ ಅದು ಸಾಬೀತು ಆಗಿದೆ. ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕವು ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, 1,03,683 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಹಲವು ಜನಪರ ಯೋಜನೆಗಳು ಹಾಗೂ ಅಭಿವೃದ್ಧಿಯ ಫಲ ಎಲ್ಲವರ್ಗಗಳಿಗೂ ತಲುಪಿರುವುದನ್ನು ಇದು ಖಾತರಿಪಡಿಸಿದೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ‘ಕರ್ನಾಟಕದ ಆರ್ಥಿಕ ಮಾದರಿ’ಯ ಯಶಸ್ಸನ್ನು ಸಾಬೀತುಪಡಿಸುತ್ತದೆ,”ಎಂದು ಹೇಳಿದರು.