
ಶಿವಮೊಗ್ಗ: ಸರ್ಕಾರಿ ನೌಕರಿಯಲ್ಲಿ ವಯೋ ನಿವೃತ್ತಿಯಾದವರಿಗೆ ಸನ್ಮಾನ ಮಾಡಿ ಮನೆಗೆ ಕಳುಹಿಸುವುದು ಸಾಮಾನ್ಯ.ಆದರೆ, ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ತಮ್ಮ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಯೊಬ್ಬರು ನಿವೃತ್ತಿಯಾದ ಹಿನ್ನೆಲೆ ಅವರನ್ನು ತಮ್ಮ ವಾಹನದಲ್ಲಿ ಅವರ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಹೊಸನಗರ ತಾಲೂಕು ಕಂದಾಯ ಇಲಾಖೆಯಲ್ಲಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಗ್ರಾಮ ಆಡಳಿತಾಧಿಕಾರಿ ಎಸ್ ವಿ ಸದಾಶಿವಪ್ಪ ಅವರು ಶನಿವಾರ ವಯೋನಿವೃತ್ತಿ ಹೊಂದಿದರು. ಅವರು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದು ದಕ್ಷರೆಂಬ ಹೆಸರು ಗಳಿಸಿದ್ದರು. ಸದಾಶಿವಪ್ಪ ಅವರಿಗೆ ಶನಿವಾರ ಹೊಸನಗರ ಕಂದಾಯ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಅವರು ತಾವು ತಾಲೂಕು ಆಡಳಿತಾಧಿಕಾರಿ ಆಗಿದ್ದರೂ ತಮ್ಮ ವಾಹನದಲ್ಲಿ ಸದಾಶಿವಪ್ಪರನ್ನು ಇಲಾಖೆಯ ವಾಹನದಲ್ಲಿ ಕೂರಿಸಿಕೊಂಡು ಅವರ ಮನೆಗೆ ತಾವೇ ಡ್ರೈವ್ ಮಾಡಿಕೊಂಡು ಹೋಗಿ ಬಿಟ್ಟು ಬರುವ ಮೂಲಕ ಮಾದರಿ ಅಧಿಕಾರಿಯಾಗಿದ್ದಾರೆ. ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.