ಕರೋನಾ ತಗ್ಗಿದ ಬೆನ್ನಲ್ಲೇ ಸಂಪೂರ್ಣವಾಗಿ ಶಾಲೆಗಳನ್ನು ಓಪನ್ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ 6ರಿಂದ ಮೇಲ್ಪಟ್ಟ ತರಗತಿಗಳು ಆರಂಭಗೊಂಡಿವೆ. ಇನ್ನುಳಿದಂತೆ 1 ರಿಂದ 5ರ ವರೆಗಿನ ತರಗತಿ ಮಾತ್ರ ತೆರಯಲು ಬಾಕಿ. ಅಕ್ಟೋಬರ್ ಎರಡನೇ ವಾರದಲ್ಲಿ 1 ರಿಂದ 5ರ ವರೆಗಿನ ತರಗತಿ ಆರಂಭವಾಗುವ ಸಾಧ್ಯತೆ. ಆದರೆ ಶಿಕ್ಷಕರ ಕೊರತೆ ಇದೆ. ಇದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1 ರಿಂದ 5ರ ಹೊರತಾಗಿ ಸದ್ಯ ಎಲ್ಲಾ ತರಗತಿಗಳು ಆರಂಭ ಆಗಿವೆ. ಅಕ್ಟೋಬರ್ ಮಧ್ಯದಿಂದ 1ರಿಂದ 5ನೇ ತರಗತಿಗಳೂ ಆರಂಭವಾಗುವ ಸಾಧ್ಯತೆ ಇದೆ. ಈ ಬಗ್ಗೆ ನಿನ್ನೆ ಖಾಸಗಿ ಶಾಲೆಗಳ ಒಕ್ಕೂಟಗಳ ಜೊತೆ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಸಭೆ ನಡೆಸಿದ್ದಾರೆ. ಸಭೆ ನಡೆಸಿ ಮುಂದಿನ ಅಕ್ಟೋಬರ್ 2ನೇ ವಾರದಲ್ಲಿ ಸಂಪೂರ್ಣವಾಗಿ ಶಾಲೆ ಓಪನ್ ಮಾಡುವ ಭರವಸೆ ಕೊಟ್ಟಿದ್ದಾರೆ. ಸದ್ಯ ಕರೋನಾ ಇಳಿಮುಖವಾದ ಹಿನ್ನೆಲೆ ಸಂಪೂರ್ಣ ಶಾಲೆ ಆರಂಭ ಮಾಡುವ ಚರ್ಚೆ ನಡೆಯುತ್ತಿದೆ. ಶಾಲೆಯೇನೋ ಆರಂಭಗೊಳ್ಳುತ್ತಿದೆ, ಆದರೆ ಸಮರ್ಪಕ ರೀತಿಯಲ್ಲಿ ರಾಜ್ಯದಲ್ಲಿ ಶಿಕ್ಷಕರ ಸಂಖ್ಯೆ ಇದೆಯೇ ಎನ್ನುವುದೇ ಈಗಿರುವ ಪ್ರಶ್ನೆ. ಹೌದು, ಹಲವು ತಿಂಗಳುಗಳ ಬಳಿಕ ಶಾಲೆಗಳು ಓಪನ್ ಆಗುತ್ತಿವೆ. ಆದರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಇದನ್ನ ಬಹಿರಂಗವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಕೂಡ ಒಪ್ಪಿಕೊಂಡಿದ್ದಾರೆ.
ಶಾಲೆ ಆರಂಭವಾಗಿಯೂ ಶಿಕ್ಷಕರಿಲ್ಲ ಎಂದ ಮೇಲೆ ಉತ್ತಮಗುಣಮಟ್ಟದ ಶಿಕ್ಷಣ ಸಿಗಲಿದೆಯೇ.!?
ಶಾಲೆ ಪ್ರಾರಂಭ ಸರಿ, ಆದರೆ ಇಷ್ಟೂ ದಿನ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಸಿಗುತ್ತಾ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 45 ಸಾವಿರ ಹಾಗೂ ಪ್ರೌಢ ಶಾಲೆಗಳಲ್ಲಿ 8 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.
ಇನ್ನು ಎಂದಿಗಿಂತಲೂ ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಭರ್ಜರಿ ದಾಖಲಾತಿ ಆಗಿದೆ. ಈ ಬಾರಿ 1-10 ತರಗತಿವರೆಗೆ 1,05,51,951 ದಾಖಲಾತಿ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ 96,22,907 ದಾಖಲಾತಿ ಆಗಿದೆ. ಸರ್ಕಾರಿ ಶಾಲೆಗಳಲ್ಲಿ 45,57,511 ಗುರಿ ಇಟ್ಟುಕೊಳ್ಳಲಾಗಿತ್ತು. ಈಗಾಗಲೇ, 43,84,864 ಅಂದರಡ 96.21% ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆಗಿದೆ. ಅನುದಾನಿತ ಶಾಲೆಗಳಲ್ಲಿ 10,88,561 ಗುರಿ ಹೊಂದಿದ್ದು, 11,76,535 ಅಂದರೆ 108% ರಷ್ಟು ಅಡ್ಮಿಷನ್ ಆಗಿದೆ. ಇದರ ಹೊರತಾಗಿ, ಅನುದಾನ ರಹಿತ ಶಾಲೆಗಳಲ್ಲಿ 46,36,386 ಗುರಿ ನಿಗದಿ ಮಾಡಲಾಗಿದ್ದು, ಸದ್ಯ 37,94,048 ಅಂದರೆ 80.81% ರಷ್ಟು ಅಡ್ಮಿಷನ್ ಖಾಸಗಿ ಕ್ಷೇತ್ರದಲ್ಲಿ ಆಗಿದೆ.
ಪ್ರತಿ ಬಾರಿಗಿಂತ ಈ ಬಾರಿ 2 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಅಡ್ಮಿಷನ್ ಮಾಡಿಕೊಂಡಿದ್ದಾರೆ. ಶಿರಸಿಯಲ್ಲಿ 98%, ಚಿತ್ರದುರ್ಗದಲ್ಲಿ 98%, ದಕ್ಷಣಿ ಕನ್ನಡದಲ್ಲಿ 97%, ಉತ್ತರ ಕನ್ನಡದಲ್ಲಿ 97%, ಗದಗದಲ್ಲಿ 97% ದಷ್ಡು ದಾಖಲಾತಿ ಈಗಾಗಲೇ ಆಗಿದೆ. ಆದರೆ ಅತಿ ಕಡಿಮೆ ಎಂದರೆ ಬೆಂಗಳೂರು ಉತ್ತರದಲ್ಲಿ, 78% ಅಡ್ಮಿಷನ್ ಇಲ್ಲಿ ಆಗಿದೆ. ಒಟ್ಟಾರೆ ಕರೋನಾ ಕಡಿಮೆ ಆಗಿರುವ ಹಿನ್ನೆಲೆ ಶಾಲೆ ಓಪನ್ ಆಗುತ್ತುರುವುದು ಸಂತಸದ ವಿಚಾರ. ಆದರೆ ಶಿಕ್ಷಕರಿಲ್ಲದೆ ಮಕ್ಕಳಿಗೆ ಯಾವ ರೀತಿಯಾದ ಶಿಕ್ಷಣ ದೊರೆಯುವುದೇ ಎನ್ನುವುದೇ ಯಕ್ಷ ಪ್ರಶ್ನೆ.