ತಮಿಳುನಾಡು ವಿಧಾನಸಭೆ ಚುನಾವಣೆಗೆ ಬೆರಳಣಿಕೆಯ ದಿನಗಳು ಬಾಕಿ ಇರುವಂತೆಯೇ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಅಳಿಯ ಹಾಗೂ ಮಗಳಿಗೆ ಸೇರಿದೆ ಎನ್ನಲಾದ ಹಲವಾರು ಸಂಸ್ಥೆ, ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಣಿ ದಾಳಿ ನಡೆಸಿವೆ.
ಇಂದು (ಶುಕ್ರವಾರ) ಬೆಳಗ್ಗೆ 8 ಗಂಟೆಯಿಂದ ಶೋಧ ಕಾರ್ಯಚರಣೆಗಳು ಆರಂಭವಾಗಿದ್ದು, ಚೆನ್ನೈಯಲ್ಲಿ ಸಬರೀಸನ್ (ಎಂಕೆ ಸ್ಟಾಲಿನ್ ಅಳಿಯ) ಅವರಿಗೆ ಸೇರಿದ ಸುಮಾರು ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಬರೀಸನ್ ಪತ್ನಿ ಸೆಂತಾಮರೈ ಹಾಗೂ ಸಬರೀಸನ್ ವಾಸಿಸುವ ನಿವಾಸದ ಮೇಲೂ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದೆ.
ಚುನಾವಣಾ ಪ್ರಚಾರ ಕಾರ್ಯಗಳಿಗೆ ಅಕ್ರಮ ಹಣ ಸಂದಾಯವಾಗುತ್ತಿರುವ ಕುರಿತು ಮಾಹಿತಿಗಳು ಲಭಿಸಿದ್ದರಿಂದ ದಾಳಿ ನಡೆಸಲಾಗಿದೆಯೆಂದು ಐಟಿ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಡಿಎಂಕೆಯ ಸ್ಥೈರ್ಯ ಕುಗ್ಗಿಸಲು ಕೇಂದ್ರದ ಸಂಚು ಇದು ಎಂದು ಆರೋಪಿಸಿರುವ ಡಿಎಂಕೆ ಕಾರ್ಯಕರ್ತರು, ಸಬರೀಸನ್ ಬೆಂಬಲಕ್ಕೆ ಅವರ ನಿವಾಸದ ಹೊರಗೆ ನೆರೆದಿದ್ದಾರೆ.
ಇದು ಡಿಎಂಕೆ ನಾಯಕರ ಮೇಲೆ ನಡೆದ ಮೊದಲ ದಾಳಿಯೇನಲ್ಲ. ಕಳೆದ ತಿಂಗಳು ಪಕ್ಷದ ಹಿರಿಯ ನಾಯಕ ಇವಿ ವೇಲು ಅವರ ಮೇಲೆಯೂ ಐಟಿ ಇಲಾಖೆ ದಾಳಿ ನಡೆದಿತ್ತು. ತಿರುವಾನ್ಮಲೈ ಕ್ಷೇತ್ರದಲ್ಲಿ ವೇಲು ಅವರಿಗೆ ಸೇರಿದ ಸುಮಾರು 10 ಕ್ಕೂ ಹೆಚ್ಚು ಕಡೆ ಅಧಿಕಾರಿಗಳ ತಂಡ ಪರಿಶೋಧ ನಡೆಸಿತ್ತು.