ವಿರೋಧಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿದೆ ಎಂಬ ಪ್ರಧಾನಿಗಳ ಆರೋಪದ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಹೊರತು ಪಡಿಸಿದರೆ, ಉಳಿದೆಲ್ಲ ಪಕ್ಷಗಳು ಮೋದಿ ಅವರು ಹೇಗೆ ಜನರನ್ನು ಹಾದಿ ತಪ್ಪಿಸಲು ಮತ್ತು ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಕೋವಿಡ್ ಸಭೆಯಲ್ಲಿ ಪೆಟ್ರೋಲ್ ತೆರಿಗೆ ಬೆಂಕಿ ಹಚ್ಚಿದ್ದಾರೆಂಬ ಅರ್ಥದಲ್ಲಿ ಟೀಕೆ ಮಾಡಿವೆ.
ಮೇಲಿನ ಟೇಬಲ್ ನೋಡಿದರೆ ಗೊತ್ತಾಗುತ್ತದೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ತೆರಿಗೆ ಎಷ್ಟು ಮತ್ತು ರಾಜ್ಯಗಳು ವಿಧಿಸುತ್ತಿರುವ ತೆರಿಗೆ ಎಷ್ಟು ಎಂಬುದು.
ವಾಸ್ತವವಾಗಿ ಕೆಲವು ರಾಜ್ಯಗಳ ಹೊರತು ಪಡಿಸಿದರೆ, ಕರ್ನಾಟಕ ಸೇರಿದಂತೆ ಬಹುತೇಕ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ತೆರಿಗೆಯು ವಿರೋಧ ಪಕ್ಷಗಳು ಆಡಳಿತ ಇರುವ ರಾಜ್ಯಗಳಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿದೆ. ಬಿಜೆಪಿ ಆಡಳಿತ ಇರುವ ಪಕ್ಷಗಳು ಅಡ್ಡದಾರಿಯಲ್ಲಿ ತೆರಿಗೆ ವಿಧಿಸುತ್ತಿವೆ ಅಷ್ಟೇ.
ಕೇಂದ್ರ ಸರ್ಕಾರದ ನಡೆಯನ್ನೇ ನೋಡಿ. ಪ್ರಧಾನಿ ಮೋದಿ ಮಾತಿಗು ವಾಸ್ತವಿಕತೆಗೂ ಎಷ್ಟು ಅಂತರ ಇದೆ ಎಂಬುದನ್ನು.
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲಿನ ಕೇಂದ್ರದ ಎಕ್ಸೈಜ್ ಸುಂಕವು 9.48 ರೂಪಾಯಿಗಳಾಗಿತ್ತು. ಅವಕಾಶ ಸಿಕ್ಕಿದಾಗಲೆಲ್ಲ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎಕ್ಸೈಜ್ ಸುಂಕ ಏರಿಸುತ್ತಾ ಮತ್ತು ವಿವಿಧ ಸೆಸ್ ಹೇರುತ್ತಾ ಬಂದ ಕಾರಣದಿಂದಾಗಿ 2021 ನವೆಂಬರ್ 4ರ ವೇಳೆಗೆ ಕೇಂದ್ರದ ಎಕ್ಸೈಜ್ ಸುಂಕವು 32.98 ರೂಪಾಯಿಗೆ ಏರಿತ್ತು. 2014ರಿಂದ 2021ರ ವರೆಗೆ ಮೋದಿ ಸರ್ಕಾರ ಏರಿಸಿದ ಕೇಂದ್ರದ ಎಕ್ಸೈಜ್ ಸುಂಕವು 23.50 ರೂಪಾಯಿ. ಅಂದರೆ ಶೇ.347ರಷ್ಟು ಹೆಚ್ಚಳವಾಗಿತ್ತು.
ಇದಾದ ನಂತರ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಸಿದ್ದತೆ ನಡೆಯುವ ಹೊತ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಕೇಂದ್ರದ ಎಕ್ಸೈಜ್ ಸುಂಕವನ್ನು 32.98 ರುಪಾಯಿಗಳಿಂದ 27.90 ರುಪಾಯಿಗಳಿಗೆ ತಗ್ಗಿಸಿತು. ತಗ್ಗಿಸಿದ್ದು ಬರೀ 5.08 ರೂಪಾಯಿಗಳು ಮಾತ್ರ. ತಗ್ಗಿಸದ ನಂತರವೂ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲೆ ಹೇರಿರುವ ಕೇಂದ್ರದ ಎಕ್ಸೈಜ್ ಸುಂಕವು 18.42 ರೂಪಾಯಿಗಳು.
ಕೇಂದ್ರ ಸರ್ಕಾರ ತಾನು ದೇಶವ್ಯಾಪಿ ಸಂಗ್ರಹಿಸುವ ಎಕ್ಸೈಜ್ ಸುಂಕದಲ್ಲಿ ಎಲ್ಲಾ ರಾಜ್ಯಗಳಿಗೂ ಪಾಲು ಕೊಡಬೇಕು. ಅದು ಗಣತಂತ್ರ ವ್ಯವಸ್ಥೆಯ ಅನುಪಾಲನೆ. ರಾಜ್ಯಗಳಿಗೆ ಕೊಡಬೇಕಾದ ಪಾಲು ತಗ್ಗಿಸಲು ಮೋದಿ ಸರ್ಕಾರವು ಕೇಂದ್ರ ಸರ್ಕಾರವು ಎಕ್ಸೈಜ್ ಸುಂಕಕ್ಕಿಂತ ಹೆಚ್ಚಾಗಿ ಸೆಸ್, ಉಪಕರಗಳನ್ನು ಭಾರಿ ಪ್ರಮಾಣದಲ್ಲಿ ಹೇರಿದೆ. ಮೋದಿ ಸರ್ಕಾರ ಅದಿಕಾರಕ್ಕೆ ಬರುವ ಮುಂಚೆ ಮೂಲ ಎಕ್ಸೈಜ್ ಸುಂಕವು ಶೇ.67ರಷ್ಟಿತ್ತು. ಇದ್ದ ಸೆಸ್ ಪ್ರಮಾಣ ಶೇ.33ರಷ್ಟು. ಅಂದರೆ, ಆಗ ಸಂಗ್ರಹಿಸುತ್ತಿದ್ದ ಮೂಲ ಎಕ್ಸೈಜ್ ಸುಂಕದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪಾಲು ನೀಡುತ್ತಿತ್ತು.ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಮೂಲ ಎಕ್ಸೈಜ್ ಸುಂಕದ ಪ್ರಮಾಣವು ಶೇ.65ರಿಂದ ಶೇ.5ಕ್ಕೆ ತಗ್ಗಿದೆ. ಉಪಕರಗಳ ಪ್ರಮಾಣವು ಶೇ.95ಕ್ಕೆ ಏರಿದೆ. ಕೇಂದ್ರ ಸರ್ಕಾರ ಹೇರುವ 27.90 ರೂಪಾಯಿ ಸುಂಕದಲ್ಲಿ ಕೇವಲ ರಾಜ್ಯಗಳಿಗೆ ದಕ್ಕುವ ಪಾಲು ಕೇವಲ 1.40 ರೂಪಾಯಿ. ಏಕೆಂದರೆ ಇದಿಷ್ಟೇ ಮೂಲ ಎಕ್ಸೈಜ್ ಸುಂಕ. ಸೆಸ್ ಮತ್ತು ಉಪಕರಗಳ ಮೂಲಕ ಸಂಗ್ರಹಿಸಿದ 26.95 ರೂಪಾಯಿಗಳನ್ನು ತನ್ನ ಖಜಾನೆಗೆ ತುಂಬಿಕೊಳ್ಳುತ್ತದೆ. ರಾಜ್ಯಗಳಿಗೆ ದಕ್ಕಬೇಕಿದ್ದ ಪಾಲನ್ನು ಕೇಂದ್ರ ಜಾಣತನದಿಂದ ಕಿತ್ತುಕೊಂಡಿದೆ. ಈಗ ಪ್ರಧಾನಿಗಳು ರಾಜ್ಯಗಳ ಮೇಲೆ ಆರೋಪ ಮಾಡುತ್ತಿದ್ದಾರೆ.
ಕೇರಳ ಶೇ. 30.08 ಮಾರಾಟ ತೆರಿಗೆ, 1ರೂಪಾಯಿ ಹೆಚ್ಚುವರಿ ತೆರಿಗೆ ಮತ್ತು ಶೇ.1ರಷ್ಟು ಸೆಸ್ ಹಾಕುತ್ತದೆ. ಅದೇ ಮಧ್ಯಪ್ರದೇಶ ಸರ್ಕಾರವು ಶೇ.29ರಷ್ಟು ವ್ಯಾಟ್ ಜತೆಗೆ ಪ್ರತಿ ಲೀಟರ್ ಗೆ 2.5 ರೂಪಾಯಿ ಹೆಚ್ಚುವರಿ ವ್ಯಾಟ್ ಮತ್ತು ಶೇ.1ರಷ್ಟು ಸೆಸ್ ವಿಧಿಸುತ್ತದೆ. ವಾಸ್ತವವಾಗಿ ಕೇರಳಕ್ಕಿಂತ ಮಧ್ಯಪ್ರದೇಶವೇ ಹೆಚ್ಚು ತೆರಿಗೆ ವಿಧಿಸುತ್ತಿದೆ. ಪ್ರಧಾನಿ ಮೋದಿ ಮಾತ್ರ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ಹೆಚ್ಚು ಎನ್ನುತ್ತಾರೆ.
ವಿವಿಧ ರಾಜ್ಯಗಳಲ್ಲಿನ ತೆರಿಗೆ ವಿವರಗಳು ಇಲ್ಲಿವೆ ನೋಡಿ. ಮೋದಿ ಹೇಳಿದ ಮಾತಿಗೂ ವಾಸ್ತವಿಕತೆಗೂ ತಾಳೆ ಹಾಕಿ ನೀವೇ ನೋಡಿ.