ಮೈಸೂರು : ಮೈಸೂರು ಭಾಗದ ಹಿರಿಯ ರಾಜಕಾರಣಿ, ಎನ್.ಆರ್ ಕ್ಷೇತ್ರದ ಸೋಲಿಲ್ಲದ ಸರದಾರ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅನಾರೋಗ್ಯದ ಕಾರಣ ನೀಡಿ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತನ್ವೀರ್ ಸೇಠ್, ಅನಾರೋಗ್ಯ ಕಾರಣದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ವಿಪಕ್ಷನಾಯಕ ಸಿದ್ಧರಾಮಯ್ಯ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಅಭಿಮಾನಿಗಳ ಹೈಡ್ರಾಮ
ಶಾಸಕ ತನ್ವೀರ್ ಸೇಠ್ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧರಿಸಿರುವ ಹಿನ್ನೆಲೆ ಅವರ ಮೈಸೂರು ನಿವಾಸದ ಬಳಿ ರಾಜಕೀಯ ಹೈಡ್ರಾಮ ನಡೆದಿದ್ದು, ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ತನ್ವೀರ್ ಸೇಠ್ ಉದಯಗಿರಿಯಲ್ಲಿರುವ ನಿವಾಸದ ಬಳಿ ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದು, ಓರ್ವ ಅಭಿಮಾನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಬಾಟಲಿಯನ್ನು ಉದಯಗಿರಿ ಠಾಣಾ ಪೊಲೀಸರು ಕಿತ್ತೆಸೆದಿದ್ದಾರೆ. ಮತ್ತೋರ್ವ ಅಭಿಮಾನಿ ತನ್ವೀರ್ ಸೇಠ್ ಮನೆಯ ಮೇಲೇರಿ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಶಾಸಕ ತನ್ವೀರ್ ಸೇಠ್ ತಮ್ಮ ನಿಲುವು ಬದಲಿಸಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇಲ್ಲವಾದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಬೆಂಬಲಿಗರು ಬೆದರಿಕೆ ಹಾಕಿದ್ದಾರೆ.
ಬೆಂಬಲಿಗರನ್ನು ಸಮಾಧಾನಪಡಿಸಲು ತನ್ವೀರ್ ಸೇಠ್ ಹರಸಾಹಸ ಪಟ್ಟಿದ್ದಾರೆ.
ತನ್ವೀರ್ ಸೇಠ್ ನಿವಾಸದ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.