ತಮಿಳುನಾಡಿನ ವಿವಿಧ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಮಸೂದೆಯನ್ನು ತಮಿಳುನಾಡು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಪ್ರಸ್ತುತ ತಮಿಳುನಾಡಿನಲ್ಲಿರುವ 13 ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಪತಿಯಾಗಿದ್ದು ಇದೀಗ ರಾಜ್ಯಪಾಲರ ಅಧಿಕಾರವನ್ನು ಕಿತ್ತಿಕೊಳ್ಳುವ ಮಸೂದೆಯನ್ನು ಅಂಗೀಕರಿಸಲಾಗಿದೆ. ರಾಜ್ಯಪಾಲ ಆರ್. ಎನ್.ರವಿ ರಾಜ್ಯ, ಕೇಂದ್ರ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳ ಎರಡು ದಿನದ ಸಮಾವೇಶಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಈ ಮಹತ್ವಕಾರಿ ಬೆಳವಣಿಗೆ ನಡೆದಿದೆ.

ಉನ್ನತ ಶಿಕ್ಷಣ ಸಚಿನ ಕೆ.ಪೊನ್‌ಮುಡಿ ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ವಿಶ್ವ ವಿದ್ಯಾಲಯಗಳ ಕಾನೂನು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಮಸೂದೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದರೆ ಮಿತ್ರ ಪಕ್ಷವಾದ ಎಐಎಡಿಎಂಕೆ ಪಕ್ಷದ ಸದಸ್ಯರು ದಿ || ಜೆ.ಜಯಲಲಿತಾರ ಬಗ್ಗೆ ಕಾಂಗ್ರೆಸ್ ಸದಸ್ಯರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ್ದರು.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶೈಕ್ಷಣಿಕ ಸಂಸ್ಥೆಗಳಿಗೆ ಶಿಕ್ಷಣ ತಜ್ಞರನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಪಾಲರ ಬಳಿಯಿದ್ದರೆ ಅದರಿಂದ ಕಾರ್ಯ ಚಟುವಟಿಕೆಗಳಿಗೆ ಹಾಗೂ ಅಧಿಕಾರಿಗಳೊಂದಿಗೆ ಸಂಘರ್ಷವಾಗಲಿದೆ. ಪ್ರಧಾನಿ ನರೇಂದ್ರ ಮೋದಿರವರ ತವರು ರಾಜ್ಯ ಗುಜರಾತ್‌ನಲ್ಲು ಸಹ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಅದಲ್ಲದೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲು ಸಹ ಸರ್ಕಾರವೇ ಕುಲಪತಿಗಳನ್ನು ನೇಮಕ ಮಾಡುತ್ತದೆ ರಾಜ್ಯಪಾಲರಲ್ಲ ಎಂದು ಹೇಳಿದ್ದಾರೆ.