ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಡುವೆ ವಾಕ್ಸಮರ ಜೋರಾಗಿದೆ. ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಹೇಳಿಕೆ ನೀಡುವಾಗ ಸಂತೋಷ್ ಲಾಡ್ ಬಳಸಿದ ಪದ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಉಭಯ ಪಕ್ಷಗಳ ನಾಯಕರು ಒಬ್ಬರ ಹೇಳಿಕೆಗೆ ಇನ್ನೊಬ್ಬರು ತಿರುಗೇಟು ನೀಡುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?
ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಟೀಕಿಸುವ ಬರದಲ್ಲಿ ಸಚಿವ ಸಂತೋಷ್ ಲಾಡ್ ಅವರು ಜನರಿಗೆ ಟೀ ಕಾಫಿ ಕುಡಿಸುವ ಬದಲು *** ಕುಡಿಸಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಸಚಿವರ ಈ ಹೇಳಿಕೆಗೆ ತಿರುಗೇಟು ನೀಡಿದ ಬಿ.ವೈ ವಿಜಯೇಂದ್ರ, ಪದ ಸಂಸ್ಕೃತಿ ವ್ಯಕ್ತಿತ್ವದ ಮುಖಬಿಂಬ ಪ್ರತಿಬಿಂಬಿಸುತ್ತದೆ. ಪದ ಸಂಸ್ಕೃತಿಯನ್ನು ಮರೆತ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕೀಳು ಮಟ್ಟದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ.

ಸಂತೋಷ್ ಲಾಡ್ ಅವರ ಎಲುಬಿಲ್ಲದ ನಾಲಿಗೆಯಲ್ಲಿ ಹೊಲಸು ಮಾತುಗಳು ಹೊಮ್ಮತ್ತಿದೆ. ಕೀಳುಮಟ್ಟದ ಪದ ಬಳಸುವ ಮೂಲಕ ಕನ್ನಡದ ಪದ ಸಂಸ್ಕೃತಿಯನ್ನು ಮಲಿನಗೊಳಿಸಿದ್ದಾರೆ. ಕನ್ನಡಿಗರ ಸಂಸ್ಕಾರ ನಡವಳಿಕೆಯನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಮ್ಮ ಸರ್ಕಾರದ ಘನತೆಯ ಕುರಿತು ಕನಿಷ್ಠ ಬದ್ಧತೆಯಿದ್ದರೆ ಈ ಕೂಡಲೇ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ರಾಜ್ಯದ ಗೌರವ ಉಳಿಸಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಸಚಿವ ಲಾಡ್ ಅವರು, ನಿಮ್ಮ ಮನೆಯ ಮಕ್ಕಳನ್ನೆಲ್ಲ ಸುಖದ ಸುಪ್ಪತ್ತಿಗೆಯಲ್ಲಿಡುತ್ತೀರಿ. ಆದರೆ ಬಡವರ ಮನೆಯ ಮಕ್ಕಳ ತಲೆಯಲ್ಲಿ ಧರ್ಮದ ವಿಷಬೀಜ ಬಿತ್ತಿ, ಬೀದಿಗೆ ಬಿಟ್ಟು ಬಲಿ ಹಾಕುತ್ತೀರಿ. ಮಾತು ಎತ್ತಿದರೆ ದೇಶ, ಧರ್ಮ, ಸಂಸ್ಕೃತಿ ಎನ್ನುತ್ತೀರಿ, ಆದರೆ ಅದೇ ಧರ್ಮದ ಹೆಸರಲ್ಲಿ ದೇಶದ ಜನರ ಭಾವನೆಗಳೊಂದಿಗೆ ಆಟವಾಡಿ, ದಾರಿ ತಪ್ಪಿಸುತ್ತೀರಿ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

ಇನ್ನು ದೆಹಲಿ ಸ್ಫೋಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಸಂತೋಷ್ ಲಾಡ್, ಘನತೆ, ಯೋಗ್ಯತೆ, ಆಚಾರ-ವಿಚಾರ, ಪದ ಸಂಸ್ಕೃತಿ, ಶಿಸ್ತು ಅಂತೆಲ್ಲ ದೊಡ್ಡ ದೊಡ್ಡ ಪದಗಳನ್ನಾಡುತ್ತೀರಿ, ಆದರೆ ಯಾವಾಗಲೂ ನೀಚ, ಚಿಲ್ಲರೆ ರಾಜಕೀಯವನ್ನೇ ನೀವು ಮಾಡುತ್ತಾ ಬಂದಿದ್ದೀರಿ. ನೀವು ಮತ್ತು ನಿಮ್ಮ ಪಕ್ಷ ಮಾಡಿದ್ದನ್ನೇ ನಾನು ನೇರವಾಗಿ ಹೇಳಿದರೆ, ನನ್ನ ಮಾತಿನಲ್ಲಿ ಸಭ್ಯತೆ ಹುಡುಕುತ್ತೀರಿ, ಆದರೆ ನಿಮ್ಮದೇ ವ್ಯಕ್ತಿತ್ವದಲ್ಲಿ ಇಷ್ಟೆಲ್ಲ ವಿಷವಿಟ್ಟುಕೊಂಡಿದ್ದೀರಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಮಾತು ಮುಂದುವರಿಸಿದ ಅವರು, ನಿಮ್ಮ ಅಂತರಂಗದ ನೀಚತನಕ್ಕೂ, ಬಹಿರಂಗದ ಸಾಚಾತನಕ್ಕೂ ಒಂದಕ್ಕೊಂದು ಸಂಬಂಧವಿಲ್ಲ, ನಿಮಗಾಗಲಿ, ನಿಮ್ಮ ಪಕ್ಷಕ್ಕಾಗಲಿ ಸಮಾಜದಲ್ಲಿ ದ್ವೇಷ ಬಿತ್ತುವುದನ್ನು ಬಿಟ್ಟು ಬೇರೆ ಏನೂ ಗೊತ್ತೂ ಇಲ್ಲ. ಇಷ್ಟರ ಹೊರತು ನಿಮ್ಮ ಬಗ್ಗೆ ನನಗ್ಯಾವ ಅಭಿಪ್ರಾಯವೂ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


