ಡೆಂಗ್ಯೂ ಜ್ವರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಧಿಕಾರಿಗಳು ಮತ್ತು ವೈದ್ಯರಿಗೆ ಸೂಚಿಸಿದ್ದಾರೆ.ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ , ಡೆಂಗ್ಯೂ ಜ್ವರ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಇನ್ನಷ್ಟು ಚುರುಕಾಗಬೇಕು. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರ ಪತ್ತೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಡೆಂಗ್ಯೂ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು. ಚರಂಡಿಗಳು, ಹಳೆಯ ಟೈರ್‌ಗಳು, ತೆಂಗಿನ ಚಿಪ್‌ಗಳಲ್ಲಿ, ತೊಟ್ಟಿಗಳಲ್ಲಿ ನೀರು ಬಹಳ ಕಾಲದವರೆಗೆ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎನ್ನುವ ಸೊಳ್ಳೆ ನಿಯಂತ್ರಣ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸೊಳ್ಳೆ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಇದರಿಂದ ಡೆಂಗ್ಯೂ ಜೊತೆಗೆ ಮಲೇರಿಯಾದಂತಹ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಹಾಗಾಗಿ ಪಿಡಿಓಗಳು ಕೇಂದ್ರಸ್ಥಾನದಲ್ಲಿದ್ದು ಸಮಸ್ಯೆಗಳಿಗೆ ಸ್ಪಂದಿಸಬೇಕು. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಎಲ್ಲಿಯೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಾವು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಬೇಕು. ಎಲ್ಲಿಯಾದರೂ ಲೋಪಗಳು ಕಾಣಿಸಿದಲ್ಲಿ ಸುಮ್ಮನಿರುವುದಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸಾರ್ವಜನಿಕರಲ್ಲಿ ಮನವಿ: ಡೆಂಗ್ಯೂ ಜ್ವರದ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ. ಸೋಂಕು ಹೊಂದಿದ ಈಡಿಸ್ ಜಾತಿಯ ಸೊಳ್ಳೆಯ ಕಡಿತದಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಇಂತಹ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.
ED ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು..!
https://youtu.be/WwK69A3RZbQ
Read moreDetails