Womens T20 World Cup 2024: ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಕರುನಾಡ ಕುವರಿ, ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕ ಪಾಟೀಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮಹಿಳಾ ಟಿ20 ವಿಶ್ವಕಪ್‌ನ 7ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಅದು ಸಹ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ. ಭಾರತದ ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಒಬ್ಬರು.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಪಾಕಿಸ್ತಾನ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮೊದಲ ಓವರ್‌ನಲ್ಲೇ ಗುಲ್ ಫಿರೋಝ (0) ರನ್ನು ಬೌಲ್ಡ್ ಮಾಡಿ ರೇಣುಕಾ ಸಿಂಗ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸಿದ್ರ ಅಮಿನ್ (8) ಸಹ ಔಟಾದರು.
ಅದಾಗ್ಯೂ ಆರಂಭಿಕ ಆಟಗಾರ್ತಿ ಮುಬಿನಾ ಅಲಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಮುಬಿನಾ (17) ಅವರನ್ನು ಸ್ಟಂಪ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ತುಬಾ ಹಸನ್ಗೂ (0) ಕನ್ನಡತಿ ಪೆವಿಲಿಯನ್ ಹಾದಿ ತೋರಿಸಿದರು.
ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದ ಅರುಂಧತಿ ರೆಡ್ಡಿಗೆ ಉತ್ತಮ ಸಾಥ್ ನೀಡಿದ ಶ್ರೇಯಾಂಕ ಪಾಟೀಲ್ 4 ಓವರ್‌ಗಳಲ್ಲಿ ನೀಡಿದ್ದು ಕೇವಲ 12 ರನ್ ಗಳು ಮಾತ್ರ. ಅಲ್ಲದೆ 2 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಈ ಮೂಲಕ ಪಾಕಿಸ್ತಾನ್ ತಂಡವನ್ನು 20 ಓವರ್‌ಗಳಲ್ಲಿ 105 ರನ್ ಗಳಿಗೆ ನಿಯಂತ್ರಿಸುವಲ್ಲಿ ಶ್ರೇಯಾಂಕ ಪಾಟೀಲ್ ಪ್ರಮುಖ ಪಾತ್ರವಹಿಸಿದರು.
ಇನ್ನು 106 ರನ್ ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಶಫಾಲಿ ವರ್ಮಾ (32), ಜೆಮಿಮಾ ರೊಡ್ರಿಗಸ್ (23) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ (29) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ 18.5 ಓವರ್‌ಗಳಲ್ಲಿ 108 ರನ್ ಗಳಿಸಿ ಟೀಮ್ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.