ತುಂಗಾಭದ್ರ ಡ್ಯಾಂ ಖಾಲಿ ಆಗ್ತಿದೆ.. ಮೌನಕ್ಕೆ ಶರಣಾಗಿದೆ ಆಡಳಿತ ಯಂತ್ರ..
ತುಂಗಭದ್ರಾ ಡ್ಯಾಂ ಖಾಲಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಆಗಸ್ಟ್ 10ರ ರಾತ್ರಿ 11.10 ರಿಂದ ಇಂದಿನವರೆಗೂ 25 ಟಿಎಂಸಿ ನೀರನ್ನು ನದಿಗೆ ಬಿಡಲಾಗಿದೆ, ಜಲಾಶಯದಲ್ಲಿ ಇನ್ನು 91.945 ಟಿಎಂಸಿ ಮಾತ್ರ ನೀರು ಉಳಿದಿದ್ದು, ಒಟ್ಟು 65 ಟಿಎಂಸಿ ನೀರನ್ನು ಹೊರಕ್ಕೆ ಬಿಡಬೇಕು ಎಂದು ತಜ್ಞರು ಈ ಮೊದಲು ಮಾಹಿತಿ ನೀಡಿದ್ದರು. ಒಟ್ಟು 105.788 ಟಿಎಂಸಿ ನೀರಿನಿಂದ ಭರ್ತಿಯಾಗಿದ್ದ ಜಲಾಶಯಕ್ಕೆ 35,650 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಾಲುವೆ ಹೊರತು ಪಡಿಸಿ ನದಿಗೆ 1,14,991 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನೀರನ್ನು 65 TMC ಖಾಲಿ ಮಾಡಿದ ನಂತರ ಕಿತ್ತು ಹೋಗಿರುವ ಗೇಟ್ ರಿಪೇರಿ ಮಾಡಲು ಸಾಧ್ಯ ಎನ್ನುತ್ತಿದ್ದಾರೆ ತಜ್ಞರು.
ತುಂಗಭದ್ರಾ ಜಲಾಶಯವನ್ನೇ ನಂಬಿಕೊಂಡ ರೈತರಿಗೆ ಈಗ ನಿರಾಸೆಯ ಕಾರ್ಮೋಡ ಕವಿದಿದೆ. ತುಂಗಭದ್ರಾ ಡ್ಯಾಂನ 19ನೇ ಗೇಟ್ ಕಿತ್ತು ಹೋಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಅಪಾರ ನೀರು ವರ್ಥವಾಗಿ ಹರಿದು ಹೋಗುತ್ತಿದೆ. ಜಲಾಶಯದ ಅರ್ಧಕ್ಕಿಂತ ಹೆಚ್ಚು ನೀರು ನದಿಗೆ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಹಂಗಾಮಿಗೆ ಕನಿಷ್ಠ 65 ಟಿಎಂಸಿ ನೀರಿನ ಅವಶ್ಯಕತೆಯಿದೆ. ಜಲಾಶಯದಿಂದ ನೀರು ಬಿಟ್ಟ ನಂತರ ಕೇವಲ 50 ಟಿಎಂಸಿ ನೀರು ಉಳಿಯುವ ಸಾಧ್ಯತೆ ಇದೆ. ಅಷ್ಟು ನೀರಿನಲ್ಲಿ ಮುಂಗಾರು ಹಂಗಾಮಿನ ಬೆಳೆಗೆ ನೀರು ಸಾಲುವುದಿಲ್ಲ ಎಂದು ರೈತರು ಆತಂಕದಲ್ಲಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 66,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 850 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ. 1,050 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗುತ್ತಿದೆ. ಡ್ಯಾಂ ಫುಲ್ ಆಗಿದೆ, ಎರಡೂ ಬೆಳೆಗೆ ನೀರು ಸಿಗುತ್ತದೆ ಎಂದು ಖುಷಿಯಾಗಿದ್ದ ರೈತರಿಗೆ ಈಗ ಡ್ಯಾಂ ಖಾಲಿ ಮಾಡುತ್ತಿರುವುದು ನಾಟಿ ಮಾಡಿರುವ ಬೆಳೆಯೂ ಹಾಳಾಗುವ ಭೀತಿಯಲ್ಲಿದ್ದಾರೆ. ಆದರೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಳ್ಳುವುದು ಬೇಡ. ಮುಂಗಾರು ಒಂದು ಬೆಳೆಗೆ ನಿಶ್ಚಿತವಾಗಿಯೂ ನೀರು ಕೊಡುತ್ತೇವೆ. ಅವಘಡದಿಂದ ಈ ಘಟನೆ ನಡೆದಿದೆ. ದುರಸ್ಥಿ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ ಸಚಿವ ಶಿವರಾಜ ತಂಗಡಗಿ.
ತುಂಗಭದ್ರಾ ಜಲಾಶಯದ ಗೇಟ್ ಕಿತ್ತು ಹೋದ ಬಳಿಕ ಗೇಟ್ ಅಳವಡಿಕೆಯಲ್ಲಿ ಪರಿಣಿತರಾದ ಹೈದ್ರಾಬಾದ್ ಮೂಲದ ಎಂಜಿನಿಯರ್ ಕನ್ಹಯ್ಯ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆ ಕನ್ಹಯ್ಯ ನಾಯ್ಡು ತಂಡ ಡ್ಯಾಂ ವೀಕ್ಷಿಸಿದ್ದು, ಸಚಿವ ಶಿವರಾಜ ತಂಗಡಗಿ ಹಾಗು ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ನೀರು ಕಡಿಮೆ ಮಾಡದೆಯೇ ಗೇಟ್ ಅಳವಡಿಸುವ ಬಗ್ಗೆ ಚರ್ಚೆ ನಡೆಸಿದ್ದು, ಸಾಧ್ಯವಾದಷ್ಟು ಬೇಗ ಗೇಟ್ ಅಳವಡಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ಹಯ್ಯ ನಾಯ್ಡು ಕೆಲವು ದಿನ ತುಂಗಭದ್ರಾ ಬೋರ್ಡ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದೀಗ ಗೇಟ್ ತಯಾರಿಸುವ ಕೆಲಸ ಭರದಿಂದ ಸಾಗುತ್ತಿದ್ದು ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ ಎನ್ನಲಾಗಿದೆ.
ಹೊಸ ಗೇಟ್ ಅಳವಡಿಕೆ ಕಾರ್ಯ ಇಂದು ಸಂಜೆಯಿಂದ ಆರಂಭ ಆಗಲಿದೆ ಎನ್ನಲಾಗಿದೆ. 19ನೇ ಹೊಸ ಕ್ರಸ್ಟ್ ಗೇಟ್ ಅಳವಡಿಕೆಗೆ ಯತ್ನ ನಡೆಯಲಿದೆ. ಸದ್ಯ ನೀರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ತಾತ್ಕಾಲಿಕ ಗೇಟ್ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. ನೀರು ಖಾಲಿಯಾಗೋ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಲು ಪ್ರಯತ್ನ ನಡೆದಿದ್ದು, ನೀರಿನಲ್ಲಿಯೇ ಗೇಟ್ ಇಳಿಸಿ ಅಳವಡಿಕೆ ಮಾಡಲು ತಂತ್ರಜ್ಞರ ತಂಡ ಕಾರ್ಯೋನ್ಮುಖ ಆಗಿದೆ. ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ಗೇಟ್ ತಯಾರಿಸಲಾಗ್ತಿದೆ. ನಾರಾಯಣ ಇಂಜನಿಯರ್ಸ್, ಹಿಂದುಸ್ತಾನ್ ಇಂಜಿನಿಯರ್ಸ್, ಜಿಂದಾಲ್ ತಂತ್ರಜ್ಞರ ತಂಡ ಕೆಲಸ ಮಾಡುತ್ತಿದೆ.
ಕೃಷ್ಣಮಣಿ