Tag: Coomar Narain Spy Case

ಫ್ರಾನ್ಸ್‌ನ ಐವರು ಸಚಿವರ ಫೋನ್‌ಗಳಲ್ಲಿ ಪೆಗಾಸಸ್‌ ಕುರುಹು ಪತ್ತೆ

ಫ್ರಾನ್ಸ್ ಸರ್ಕಾರದ ಐದು ಹಾಲಿ ಸಚಿವರ ಫೋನ್’ಗಳಲ್ಲಿ ಪೆಗಾಸಸ್ ತಂತ್ರಾಂಶದ ಕುರುಹುಗಳು ಪತ್ತೆಯಾಗಿವೆ. ಮೀಡಿಯಾಪಾರ್ಟ್ ಎಂಬ ಅಂತರ್ಜಾಲ ತಾಣವು ಫ್ರಾನ್ಸ್’ನ ಭದ್ರತಾ ಸಂಸ್ಥೆಗಳನ್ನು ಉಲ್ಲೇಖಿಸಿ ನೀಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.  ಫ್ರಾನ್ಸ್ ಸರ್ಕಾರದ ಶಿಕ್ಷಣ, ಕೃಷಿ, ವಸತಿ, ವಿದೇಶಾಂಗ ಇಲಾಖೆ ಹಾಗೂ ಪ್ರಾದೇಶಿಕ ಒಗ್ಗಟ್ಟು ಇಲಾಖೆಗಳ ಸಚಿವರ ಫೋನ್’ಗಳನ್ನು ಹ್ಯಾಕ್ ಮಾಡಲಾಗಿದೆ. ಜೀನ್ ಮೈಕಲ್ ಬ್ಲಾಂಕೆರ್, ಜಾಕ್ವೆಲಿನ್ ಗೌರಾಲ್ಟ್, ಜೂಲಿಯನ್ ಡೆನಾರ್ಮಾಂಡಿ, ಇಮ್ಮಾನುಯೆಲ್ ವಾರ್ಗನ್ ಹಾಗೂ ಸೆಬಾಸ್ಟಿಯನ್ ಲೆಕಾರ್ನ್ ಅವರ ಫೋನ್ ಗಳಲ್ಲಿ ಈ ಪೆಗಾಸಸ್ ತಂತ್ರಾಂಶವನ್ನು ಅಳವಡಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.  ಜುಲೈ ಕೊನೆಯ ವಾರದಲ್ಲಿ ಈ ಐವರ ಫೋನ್’ಗಳ ಫೊರೆನ್ಸಿಕ್ ವರದಿ ನೀಡಲಾಗಿತ್ತು. ಈ ವರದಿಯಲ್ಲಿ ಪೆಗಾಸಸ್ ಹೋಲುವ ತಂತ್ರಾಂಶಗಳು ಇವೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಇದು ಫ್ರೆಂಷ್ ಸ್ಟೇಟ್ ಇಂಟೆಲಿಜೆನ್ಸ್ ಸರ್ವಿಸಸ್ ಹಾಗೂ ಪ್ಯಾರಿಸ್’ನ ಸರ್ಕಾರಿ ವಕೀಲರು ಸೇರಿ ನಡೆಸಿದಂತಹ ಜಂಟಿ ತನಿಖೆಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ, ಎಂದು ಮೀಡಿಯಾಪಾರ್ಟ್ ಹೇಳಿದೆ.  ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮ ಸಂಸ್ಥೆಗಳು ಸೇರಿ ನಡೆಸಿದಂತಹ ತನಿಖೆಯಲ್ಲಿ ಪೆಗಾಸಸ್ ತಂತ್ರಾಂಶದ ಕರಾಳತೆ ಬಹಿರಂಗವಾಗಿತ್ತು. ಈ ವರದಿಯು ವಿಶ್ವದಲ್ಲಿ ಸಂಚಲನ ಮೂಡಿಸಿತ್ತು. ನೂರಾರು ವಿಶ್ವ ನಾಯಕರನ್ನು ಪೆಗಾಸಸ್ ಮೂಲಕ ಕಣ್ಗಾವಲಿನಲ್ಲಿ ಇಡಲಾಗಿತ್ತು ಎಂದು ಈ ವರದಿ ಹೇಳಿತ್ತು. ಈಗ ಫ್ರಾನ್ಸ್ ಸರ್ಕಾರ ದೃಢಪಡಿಸಿರುವ ಐದು ಜನ ಸಚಿವರ ಹೆಸರುಗಳು ಕೂಡಾ ಆ ಪಟ್ಟಿಯಲ್ಲಿತ್ತು.  ಸಚಿವರ ಮೇಲೆ ಕಣ್ಗಾವಲು ಇಡುವ ವೇಳೆಗೆ, ಈ ಐವರಲ್ಲಿ ಎಲ್ಲರೂ ತಮ್ಮ ಹಾಲಿ ಸ್ಥಾನದಲ್ಲಿ ಇರಲಿಲ್ಲ. ಆದರೆ, 2019 ಮತ್ತು 2020ರಿಂದ ಇವರು ಫ್ರಾನ್ಸ್ ಸರ್ಕಾರದ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದರು.  ಈಗ ಮಿಡಿಯಾಪಾರ್ಟ್ ನೀಡಿರುವ ವರದಿ ನಿಜವಾಗಿದ್ದಲ್ಲಿ, ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಬಲವಾದ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಉನ್ನತ ಮಟ್ಟದ ಮಾಹಿತಿಯನ್ನು ಕದಿಯುತ್ತಿರುವುದು ಸ್ಪಷ್ಟವಾಗುತ್ತದೆ.  ಕೇವಲ ಅಧಿಕೃತ ಸರ್ಕಾರಗಳಿಗೆ ಮಾತ್ರ ಈ ಪೆಗಾಸಸ್ ತಂತ್ರಾಂಶವನ್ನು ಒದಗಿಸುತ್ತಿರುವುದಾಗಿ ಹೇಳಿರುವ ಎನ್ಎಸ್ಒ ಸಂಸ್ಥೆಯು, ಮಾಧ್ಯಮಗಳು ಬಹಿರಂಗಪಡಿಸಿದ ಪಟ್ಟಿಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿದೆ.  ಗುರುವಾರದಂದು ಹೊಸ ಹೇಳಿಕೆ ನೀಡಿರುವ ಎನ್ಎಸ್ಒ ಸಂಸ್ಥೆ, ನಾವು ಈ ಹಿಂದೆ ಹೇಳಿದಂತೆ ಫ್ರಾನ್ಸ್ ಸಚಿವರು ಪೆಗಾಸಸ್ ತಂತ್ರಾಂಶಕ್ಕೆ ಗುರಿಯಾಗಿರಲಿಲ್ಲ. ಅನಾಮಿಕ ಸುದ್ದಿಮೂಲಗಳಿಂದ ಮಾಹಿತಿ ಪಡೆದು ಪ್ರಕಟಿಸಿರುವ ವರದಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.  ಈ ಕುರಿತಾಗಿ ಪ್ರತಿಕ್ರಿಯಿಸಲು ಆ ಐವರು ಸಚಿವರು ಕೂಡಾ ನಿರಾಕರಿಸಿದ್ದಾರೆ. ಇವರಲ್ಲಿ ಒಬ್ಬ ಸಚಿವರು ತಮ್ಮ ಲ್ಯಾಂಡ್ ಲೈನ್ ಹಾಗು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದಾರೆ ಎಂಬ ಮಾಹಿತಿಯನ್ನು ಮೀಡಿಯಾಪಾರ್ಟ್ ಬಹಿರಂಗಪಡಿಸಿದೆ.  ಫ್ರಾನ್ಸ್ ಸಚಿವರ ಮೇಲೆ ಬೇಹುಗಾರಿಕೆ ನಡೆಸಲು ಯಾರು ಈ ತಂತ್ರಾಂಶವನ್ನು ಬಳಸಿರಬಹುದು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಯೂರೋಪ್ ಮಾಧ್ಯಮಗಳು ಮೊರಾಕ್ಕೊ ಸರ್ಕಾರದೆಡೆಗೆ ಬೆರಳು ಮಾಡಿ ತೋರಿಸುತ್ತಿವೆ. ಈ ವಾದವನ್ನು ಅಲ್ಲಗೆಳೆದಿರುವ ಮೊರಾಕ್ಕೊ ಸರ್ಕಾರ, ಮಾಧ್ಯಮಗಳ ವಿರುದ್ದ ಮಾನಹಾನಿ ಮೊಕದ್ದಮೆಯನ್ನು ಹೂಡಿದೆ. 

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!