ಸ್ಥಳಾವಕಾಶದ ಕೊರತೆ: ಭೀಮಾ ಕೋರೆಗಾಂವ್ ವಿಚಾರಣೆ ಮುಂದೂಡಿದ ಆಯೋಗ
ಜನವರಿ 2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ವಿಚಾರಣೆ ನಡೆಸಲು ಸೂಕ್ತವಾದ ಸ್ಥಳಾವಕಾಶವನ್ನು ಮಹಾರಾಷ್ಟ್ರ ಸರ್ಕಾರ ನೀಡುವವರೆಗೆ ಪ್ರಕರಣದ ಕುರಿತ ಯಾವುದೇ ತನಿಖೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಆಯೋಗವು ಹೇಳಿದೆ. ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಜೆ ಎನ್ ಪಟೇಲ್ ನೇತೃತ್ವದ ದ್ವಿಸದಸ್ಯ ಆಯೋಗವು, ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಮುಚ್ಚಲ್ಪಟ್ಟಿದ್ದ ತನಿಖೆಯು ಹದಿನಾಲ್ಕು ತಿಂಗಳ ನಂತರ ಆಗಸ್ಟ್ 2021ರಲ್ಲಿ ಆರಂಭವಾಗಿತ್ತು. ಈ ವೇಳೆ ಮುಂಬೈನ ರಾಜ್ಯ ಮಾಹಿತಿ ಆಯೋಗದ ಕಚೇರಿಯಲ್ಲಿ ವಿಚಾರಣೆ ನಡೆಸಲು ಸ್ಥಳ ನೀಡಲಾಗಿತ್ತು. ಈ ಕಚೇರಿಯು ಅತ್ಯಂತ ಇಕ್ಕಟ್ಟಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ತನಿಖಾ ಆಯೋಗ ದೂರಿದೆ. ಅಕ್ಟೋಬರ್ 31ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಸರ್ಕರಿ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ, ಆಯೋಗದ ಕಾರ್ಯದರ್ಶಿಯಾಗಿರುವ ವಿ ವಿ ಪಳ್ನೀತ್ಕರ್ ಅವರು, ತನಿಖೆ ಮುಂದುವರೆಸಲು ಉತ್ತಮ ಕಚೇರಿಯನ್ನು ಶೀಘ್ರದಲ್ಲಿ ನೀಡುವಂತೆ ಕೋರಿದ್ದಾರೆ. “ಅಕ್ಟೋಬರ್ 28ರಂದು ನಡೆದ ಸಭೆಯಲ್ಲಿ, ತನಿಖಾ ಆಯೋಗವು ಎದುರಿಸುತ್ತಿರುವ ಸ್ಥಳಾವಕಾಶದ ಕೊರತೆಯನ್ನು ನೇರವಾಗಿ ಮುಖ್ಯಮಂತ್ರಿ ಕಾರ್ಯಲಯದೊಂದಿಗೆ ಚರ್ಚಿಸಲು ಆಯೋಗದ ಅಧ್ಯಕ್ಷರಾಗಿರುವ ಜಸ್ಟೀಸ್ ಪಟೇಲ್ ಅವರು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲಹೆ ನೀಡಿದ್ದರು. ತುರ್ತಾಗಿ ಬೇರೆ ಸ್ಥಳವನ್ನು ಆಯೋಗಕ್ಕೆ ನೀಡುವಂತೆ ಹೇಳಿದ್ದರು. ಅಕ್ಟೋಬರ್ 29,2021ರ ಒಳಗೆ ಆಯೋಗಕ್ಕೆ ಯಾವುದೇ ಉತ್ತಮ ಕಚೇರಿ ನೀಡದಿದ್ದಲ್ಲಿ ಮುಂಬರುವ ವಿಚಾರಣೆಗಳನ್ನು ಆಯೋಗವು ಅಮಾನತಿನಲ್ಲಿಡುವುದು,” ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ, ಅಕ್ಟೋಬರ್ 31ರವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಆಯೋಗವು ಹೇಳಿದೆ. ಹೀಗಾಗಿ, ಮುಂದಿನ ವಿಚಾರಣೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲಾಗಿದೆ. ಸರ್ಕಾರ ಆಯೋಗದ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವವರೆಗೂ ತನಿಖೆ ಮುಂದುವರೆಯುವುದಿಲ್ಲ ಎಂದು ಆಯೋಗ ಹೇಳಿದೆ. ಜನವರಿ 1, 2018ರಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸುವ ವೇಳೆ ಉಂಟಾದ ಹಿಂಸಾಚಾರದ ಕುರಿತು ಆಯೋಗವು ತನಿಖೆ ನಡೆಸುತ್ತಿದೆ. ವಿಜಯೋತ್ಸವ ನಡೆಯುವ ಒಂದು ದಿನ ಮುನ್ನ ಎಲ್ಗರ್ ಪರಿಷದ್ ಸಮಾವೇಷದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣವಾಯಿತು. ಎಲ್ಗರ್ ಪರಿಷದ್ ಒಂದು ಮಾವೋವಾದಿ ಬೆಂಬಲಿತ ಸಂಘಟನೆ ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಲಾಗಿದೆ. ತನಿಖಾ ವರದಿಯನ್ನು ಸಲ್ಲಿಸಲು ಸರ್ಕಾರವು ಆಯೋಗಕ್ಕೆ ನೀಡಿದ್ದ ಗಡುವನ್ನು ಹಲವು ಬಾರಿ ಮುಂದೂಡಿದ್ದರೂ, ಇನ್ನೂ ವರದಿ ಸಲ್ಲಿಕೆಯಾಗಿಲ್ಲ.
Read moreDetails