Tag: ತದ್ವಿರುದ್ಧ ವಾಸ್ತವ

ಪ್ರಧಾನಿ ಮೋದಿಯ ಮೇಡ್ ಇನ್ ಇಂಡಿಯಾ ಕನಸು ಹಾಗೂ ತದ್ವಿರುದ್ಧ ವಾಸ್ತವ

ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದರು. ದೇಶದಲ್ಲಿ ನೂರು ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ ಯಶಸ್ಸಿಗೆ ದೇಶವಾಸಿಗಳನ್ನು ಅಭಿನಂದಿಸಿದರು. ಇದರೊಂದಿಗೆ, ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಿ ಹಾಗೂ ಉತ್ಪಾದಕರಿಂದಲೇ ವಸ್ತುಗಳನ್ನು ಖರೀದಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.  ಕರೋನಾದಿಂದ ಪಾತಾಳಕ್ಕೆ ಇಳಿದಿರುವ ಆರ್ಥಿಕ ಸ್ಥಿತಿಯಿಂದಾಗಿ ದೇಶದಲ್ಲಿ ಈಗಾಗಲೇ ಲಕ್ಷಾಂತರ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿಹೋಗಿವೆ. ಇದೇ ಸಂದರ್ಭದಲ್ಲಿ ‘ಬಾಯ್ಕಾಟ್ ಚೀನಾ’ ಎಂಬ ಚೀರಾಟದ ನಡುವೆಯೇ, ಭಾರತದ ಮಾರುಕಟ್ಟೆಯಲ್ಲಿ ಚೀನೀ ಸರಕುಗಳು ತನ್ನ ಸಾಮ್ರಾಜ್ಯವನ್ನು ಮತ್ತೆ ಮರುಸ್ಥಾಪಿಸಿವೆ. ಇವೆಲ್ಲದರ ನಡುವೆ ಭಾರತೀಯ ಉದ್ದಿಮೆಗಳ ಅಭಿವೃದ್ಧಿಗೆ ಸರ್ಕಾರ ನೀಡಿರುವ ಅನುದಾನದ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ತಲುಪಿದೆ ಎಂಬುದು ಕೂಡಾ ಈ ಸಂದರ್ಭದಲ್ಲಿ ಕೇಳಲೇಬೇಕಾದ ಪ್ರಶ್ನೆ.  ಚೀನಾ ಕಸ್ಟಮ್ಸ್ ವರದಿಯ ಪ್ರಕಾರ ಮೊದಲ 2021ರ ಮೊದಲ ಆರು ತಿಂಗಳಲ್ಲಿ ಚೀನಾದಿಂದ ಭಾರತಕ್ಕೆ 48.16 ಬಿಲಿನ್ ಡಾಲರ್ ಮೌಲ್ಯದ ವಸ್ತುಗಳು ಆಮದಾಗಿವೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಚೀನಾ ಮೂಲದ ವಸ್ತುಗಳನ್ನು ಬಹಿಷ್ಕರಿಸಲು ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಜನರು ಬೀದಿ ಬೀದಿಗಳಲ್ಲಿ ಅಗ್ಗದ ದರದ ಚೀನೀ ಮೊಬೈಲ್’ಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಗಲ್ವಾನ ಘಟನೆ ನಡೆದ ಕೇವಲ ಆರೇ ತಿಂಗಳಲ್ಲಿ ಎಲ್ಲರೂ ಈ ಆಕ್ರೋಶವನ್ನು ಮರೆತು ಮತ್ತೆ ಚೀನಿ ಸರಕುಗಳತ್ತ ವಾಲತೊಡಗಿದ್ದಾರೆ. ಇದರೊಂದಿಗೆ ಸರ್ಕಾರದ ‘ಮಾಸ್ಟರ್ ಸ್ಟ್ರೋಕ್’ ಆಗಿ ಮೂಡಿ ಬಂದ ಚೀನಿ ಆ್ಯಪ್’ಗಳ ಮೇಲಿನ ಬ್ಯಾನ್ ಈಗ ‘ನಾಮ್ ಕೇ ವಾಸ್ತೆ’ ಎಂಬುದು ಸಾಬೀತಾಗಿದೆ.  ಚೀನಾದಿಂದ ರಫ್ತು ಮಾಡಲಾಗುವ ಎಲ್ಲಾ ದೇಶಗಳಿಗೆ ಹೋಲಿಸದರೆ, ಭಾರತವು ಚೀನಾದೊಂದಿಗೆ ಅತೀ ಹೆಚ್ಚಿನ ವ್ಯವಹಾರವನ್ನು ನಡೆಸುತ್ತಿದೆ. ಈ ವರ್ಷದ ಏಪ್ರಿಲ್ ಹಾಗು ಮೇ ತಿಂಗಳಲ್ಲಿ ಭಾರತ ಮತ್ತು ಚೀನಾ ನಡುವೆ ದಾಖಲೆ ಮಟ್ಟದ ವ್ಯವಹಾರ ನಡೆದಿದೆ. ಕೋವಿಡ್ ವಿರುದ್ದದ ಹೋರಾಟಕ್ಕೆ ಸಮಬಂಧಪಟ್ಟ ವೈದ್ಯಕೀಯ ಪರಿಕರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ‘ಪಿಎಂ ಕೇರ್ಸ್’ ಯೋಜನೆಯಡಿ ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಲಾಗುವುದು ಎಂದು ಅಬ್ಬರದ ಪ್ರಚಾರ ಮಾಡಿದ್ದ ಬಿಜೆಪಿ ಸರ್ಕಾರವೇ ಮತ್ತೆ ಚೀನೀ ಸರಕುಗಳ ಮೊರೆ ಹೋಗಿದೆ.  ಚಿತ್ರ ಕೃಪೆ - ದಿನೇಶ್‌ ಕುಕ್ಕಜಡ್ಕ ತಜ್ಞರ ಅಭಿಪ್ರಾಯವೇನು?  ಮುಂದಿನ ದಿನಗಳಲ್ಲಿ ಚೀನಾದೊಂದಿಗಿನ ವಹಿವಾಟು ಕಡಿಮೆಯಾಗುವ ಸಂಭವವಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಈಗ ವಹಿವಾಟು ಹೆಚ್ಚಾಗಲು ಅವರು ನೀಡಿರುವ ಕಾರಣ, ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ ಹಿಡಿರುವ ಕೈಗನ್ನಡಿಯಾಗಿದೆ.  “ಲಾಕ್ಡೌನ್ ಕಾರಣದಿಂದಾಗಿ ಹಲವು ಉದ್ದಿಮೆಗಳು ಪ್ರಪಂಚದಾದ್ಯಂತ ಮುಚ್ಚಲ್ಪಟ್ಟಿದ್ದವು. ಆದರೆ, ಈ ಸಂದರ್ಭದಲ್ಲಿ ಚೀನಾ ಮಾತ್ರ ರಫ್ತು ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿತ್ತು. ಇದರಿಂದಾಗಿ ಚೀನಾ ದೇಶದಿಂದ ಆಮದು ಹೆಚ್ಚಾಗಿದೆ. ಎಂಎಸ್ಎಂಇಗಳ ಪುನಶ್ಚೇತನದಿಂದಾಗಿ ನಾವು ಇದನ್ನು ಕಡಿಮೆಗೊಳಿಸಬಹುದು, ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಅಜಯ್ ಸಹಾಯ್ ಹೇಳಿದ್ದಾರೆ.  ಆದರೆ, ಈಗಾಗಲೇ ಕಂಡು ಕೇಳರಿಯದ ನಷ್ಟಕ್ಕೆ ಸಿಲುಕಿರುವ ಎಂಎಸ್ಎಂಇಗಳು ಮತ್ತೆ ತಮ್ಮ ಕಾಲ ಮೇಲೆ ತಾವು ನಿಲ್ಲಲು ಇನ್ನಿಲ್ಲದ ಶ್ರಮ ಪಡಬೇಕಿದೆ. ಸರ್ಕಾರ ಆತ್ಮನಿರ್ಭರ್ ಪ್ಯಾಕೇಜ್ ಘೋಷಿಸಿದರೂ, ಅದು ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿರುವುದು ಉದ್ದಿಮೆದಾರರಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.  ಉದ್ದಿಮೆಗಳನ್ನು ಆರಂಭಿಸಲು ಸುಲಭ ಸೌಲಭ್ಯ ಕಲ್ಪಿಸುವುದು ಈ ಹೊತ್ತಿನ ಜರೂರತ್ತು. ಏಕೆಂದರೆ, ದೇಶದ ಆರ್ಥಿಕತೆ ಮತ್ತಷ್ಟು ಕುಸಿಯದಂತೆ, ನೋಡಿಕೊಳ್ಳದ ಅಗತ್ಯವಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಯಿಂದ ಇದು ಸಾಧ್ಯ. ಉತ್ತಮ ಸಾಲ ಯೋಜನೆ ರೂಪಿಸುವುದು, ಕಾರ್ಪೊರೇಟ್ ಸಾಲ ಮನ್ನಾ ಮಾಡಿದಂತೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಾಲ ಮನ್ನಾ ಮಾಡುವಂತಹ ಯೋಜನೆಗಳನ್ನು ರೂಪಿಸಿದಲ್ಲಿ, ಕೈಗಾರಿಕೆಗಳು ಮತ್ತೆ ಭಾರತದಲ್ಲಿ ಉಸಿರಾಡಲಿವೆ.  ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಹೊಸದಾಗಿ ತನ್ನ ಪಾರುಪತ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿರುವ ಚೀನೀ ಸರಕುಗಳ ಮುಂದೆ ಭಾರತೀಯ ಸರಕುಗಳು ಮಂಡಿಯೂರವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್’ನ ಅಸಮರ್ಪಕ ನಿರ್ವಹಣೆ, ಗೊತ್ತು ಗುರಿಯಿಲ್ಲದ ಹಣಕಾಸು ಯೋಜನೆಗಳ ಮುಂದೆ ಜನರ ಪರಿಸ್ಥಿತಿ ಅಯೋಮಯವಾಗಿದೆ. ಕೇವಲ ಬಾಯಿ ಚಪಲಕ್ಕಾಗಿ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಭಾಷಣ ಬಿಗಿಯುವ ಬದಲು, ನಿಜ ಅರ್ಥದಲ್ಲಿ ಮೇಕ್ ಇನ್ ಇಂಡಿಯಾ ಸರಕುಗಳಿಗೆ ಉತ್ತೇಜನ ನೀಡಲು ಆರಂಭಿಸಿದ್ದಲ್ಲಿ ಮಾತ್ರ ಆರ್ಥಿಕ ಬೆಳವಣಿಗೆ ಸಾಧ್ಯ. 

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!