Tag: ಚಾಮರಸ ಮಾಲಿಪಾಟೀಲ

ನರಗುಂದ ಸಮಾವೇಶ ತೋರಿದ ಕರ್ನಾಟಕದ ಚಳುವಳಿಗಳ ವೈಫಲ್ಯವೇನು?

ಜುಲೈ 21ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಸೇರಿ ಸಮಾವೇಶ ನಡೆಸಿದವು. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿತ್ತೇ ಹೊರತು, ಅಲ್ಲಿ ಭಾಗವಹಿಸಿದ ಸಂಘಟನೆಗಳ ಮಧ್ಯೆ ಒಂದು ಒಳಗೊಳ್ಳುವಿಕೆಯ ಪ್ರಕ್ರಿಯೆ ಕಾಣಲಿಲ್ಲ. ಇಷ್ಟೆಲ್ಲ ಸಂಘಟನೆಗಳ ಸೇರುವಿಕೆಯ ನಡುವೆಯೂ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತಾಪಿಗಳನ್ನು  ಸೇರಿಸಲಾಗಲಿಲ್ಲ ಎಂಬುದನ್ನು ಗಮನಿಸಬೇಕು. 41 ವರ್ಷಗಳ ಹಿಂದೆ ನಡೆದ ನರಗುಂದ ಬಂಡಾಯ ಮತ್ತು ಕಳೆದ 6 ವರ್ಷ‍ಗಳಿಂದ ನಡೆಯುತ್ತಿರುವ ನೀರಾವರಿ ಹೋರಾಟದ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವಲ್ಲಿ ಈಗಿನ ಸಂಘಟನೆಗಳು ವಿಫಲವಾದವೆ? ಎಂಬ ಪ್ರಶ್ನೆ ನಮ್ಮ ಎದುರಿದೆ. ಕನ್ನಡ ಪರ ಸಂಘಟನೆಗಳು ಇಲ್ಲಿ ನಾಮಕಾವಸ್ತೆ ಬೆಂಬಲ ಕೊಟ್ಟು ಪ್ರಚಾರ ಪಡೆದು ನಂತರ ಲೋಕಲ್‍ ರಾಜಕಾರಣಕ್ಕೆ ಬಲಿಯಾದವೇ? ದೆಹಲಿ ಹೋರಾಟದಲ್ಲಿ ಉತ್ತರ ಭಾರತದ ದಲಿತ, ಹಿಂದುಳಿದ ಕೃಷಿ ಕಾರ್ಮಿಕರು ಪಾಲ್ಗೊಳ್ಳುತ್ತಿರುವಾಗ, ನರಗುಂದದಲ್ಲಿ ಅಥವಾ ಒಟ್ಟೂ ಕರ್ನಾಟಕದಲ್ಲಿ ಅದೇಕೆ ಸಾಧ್ಯವಾಗುತ್ತಿಲ್ಲ? ಈ ದೃಷ್ಟಿಕೋನದಲ್ಲಿ  ಪ್ರಶ್ನೆಗಳನ್ನು ಇಟ್ಟುಕೊಂಡು ‘ಪ್ರತಿಧ್ವನಿ’ ಹಲವರೊಂದಿಗೆ ಚರ್ಚೆ ನಡೆಸಿತು. ನರಗುಂದಕ್ಕೆ ಬಂದಿದ್ದ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯದರ್ಶಿ ಚಾಮರಸ ಮಾಲಿಪಾಟೀಲ್‍, ‘ನರಗುಂದದ ಸಮಾವೇಶ ನಿರಾಶೆ ಮೂಡಿಸಿತು. ಇಲ್ಲಿನ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಘಟಕರು ವಿಫಲರಾಗಿದ್ದಾರೆ. ಅದು ಕೇವಲ ಅವರ ತಪ್ಪಲ್ಲ. ಇತರ ಸಂಘಟನೆಗಳು ಕಾಟಾಚಾರಕ್ಕೆ ಬೆಂಬಲ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಂಡವು. ನಮ್ಮ ಮಧ್ಯಮ ವರ್ಗದ ರೈತ ಕುಟುಂಬಗಳಿಗೂ ಸಮಸ್ಯೆಯ  ಗಂಭೀರತೆ ತಟ್ಟೇ ಇಲ್ಲ’  ಎಂದರು. ಚಾಮರಸ ಮಾಲಿಪಾಟೀಲರ ಮಾತುಗಳ ಹಿನ್ನೆಲೆಯಲ್ಲಿ ನೋಡಿದರೆ, ಸಮಾವೇಶಕ್ಕೂ ಮುನ್ನ ನಿರೀಕ್ಷೆ ಇದ್ದಷ್ಟು, ವಾಸ್ತವವಾಗಿ ಜನಬೆಂಬಲ ಸಿಗಲಿಲ್ಲ. ನರಗುಂದದಲ್ಲಿ 6 ವರ್ಷದಿಂದ ನಡೆಯುತ್ತಿರುವ ಒಂದು ನೀರಾವರಿ ಹೋರಾಟಕ್ಕೆ ಆರಂಭದಲ್ಲಿ ಸಿಕ್ಕಷ್ಟು ಜನಬೆಂಬಲ ಈಗಿಲ್ಲ. ಇಲ್ಲಿ ಹೋರಾಟ ನಡೆಸುತ್ತಿರುವವರಲ್ಲಿ ಕೆಲವರು ವೃತ್ತಿಪರ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡರು, ಪ್ರಚಾರಕ್ಕೆ ಹಾತೊರೆದರು ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಸರಿಯಾದ ಸಂದರ್ಭದಲ್ಲಿ ಧ್ವನಿ ಎತ್ತದೆ ಹೋದರು. ರೈತ ಸಂಘದ  ಯಾವ ಬಣಗಳೂ ಇಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಕನ್ನಡ ಪರ ಸಂಘಟನೆಗಳದ್ದು ಕೇವಲ ಆರಂಭಶೂರತ್ವವಾಗಿತ್ತು. ಈ ಕಾರಣಕ್ಕೇ ಮೊನ್ನೆಯ ನರಗುಂದ ಸಮಾವೇಶದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಜನ ಸೇರಿಸುವಲ್ಲಿ ಈ ಸಂಘಟನೆಗಳು ವಿಫಲವಾದವು ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ರೈತಸಂಘ ಸೇರಿದಂತೆ ರಾಜ್ಯದ ಬಹುಪಾಲು ಚಳವಳಿಗಳ ಬಿಕ್ಕಟ್ಟುಗಳೇನು ಎಂಬ ಕುರಿತು ನಾಡಿನ ಹಲವು ಚಿಂತಕರು ಮತ್ತು ಹೋರಾಟಗಾರರ ಅಭಿಪ್ರಾಯಗಳು ಇಲ್ಲಿವೆ. ರಾಜ್ಯ ರೈತ ಸಂಘದ ಒಂದು ಬಣದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್‍, ‘40 ವರ್ಷದ ಹಿಂದಿನ ನರಗುಂದ ಬಂಡಾಯದ ನೆನಪಿನಲ್ಲಿ ನಡೆದ ಈ ಸಮಾವೇಶವೂ ಐತಿಹಾಸಿಕ ಎಂದರು. ಆದರೆ, ರಾಜ್ಯದಲ್ಲಿ ಒಟ್ಟಾರೆ ರೈತ ಚಳುವಳಿಯ ಹಿನ್ನಡೆಗೆ ಏನು ಕಾರಣ ಎಂಬುದಕ್ಕೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ರೈತ ಸಂಘಟನೆ ಅಧಿಕಾರ ರಾಜಕಾರಣಕ್ಕೆ ಹೋಗಬೇಕು ಎಂದು ಹೇಳುವ ಅವರು, ರೈತಸಂಘದ ಚಟುವಟಿಕೆಯ ಪ್ರಕ್ರಿಯೆಯಲ್ಲಿ ನಾಯಕತ್ವ ಮತ್ತು ಸಂಘಟನೆಯಲ್ಲಿ ತೊಡಕು ಉಂಟಾದವು ಎನ್ನುತ್ತಾರೆ. ದೆಹಲಿ ಹೋರಾಟದಲ್ಲಿ ರೈತರ ಜೊತೆಗೆ ಭೂರಹಿತ ಕೃಷಿ ಕಾರ್ಮಿಕರು ಪಾಲ್ಗೊಂಡಿದ್ದಾರೆ, ಅದು ಈ ರಾಜ್ಯದಲ್ಲಿ ಸಾಧ್ಯವೇ ಆಗಲಿಲ್ಲ ಎಂಬ ನಮ್ಮ ಪ್ರಶ್ನೆಗೆ ಅವರು ಕೊಟ್ಟ ಉತ್ತರ ತೀರಾ ತೆಳುವಾಗಿತ್ತು. ‘ರೈತ ಸಮೂಹವೆಂದರೆ ಅದರಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಇರುತ್ತಾರೆ. ನಮ್ಮ ಚಳುವಳಿಯಲ್ಲಿ ಜಾತಿ, ಧರ್ಮ ಯಾವುದಕ್ಕೂ ಆಸ್ಪದವಿಲ್ಲ’ ಎಂದರು. ಮೂರು ಕೃಷಿ ಕಾನೂನುಗಳ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅವರು ಎಂದಿನಂತೆ ಕಿಡಿಕಾರಿದರು. ನರಗುಂದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಜನಶಕ್ತಿಯ ಸಂಘಟನೆಯ ನಾಯಕ ನೂರ್‍ ಶ್ರೀಧರ್‍, ‘ಇದು ಒಂದು ಉತ್ತಮ ಕಾರ್ಯಕ್ರಮವಾಗಿತ್ತು. ಆದರೆ ಸಮಾವೇಶದ ಸ್ವರೂಪ ಇರಲಿಲ್ಲ’ ಎಂಬುದನ್ನು ಒಪ್ಪಿಕೊಂಡರು. ಸಂಘಟನೆಗಳು ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಎಡವುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ  ನೂರ್‍ ಶ್ರೀಧರ್‍, ‘ಸಂಘಟನೆ/ಚಳವಳಿಗಳು ಅಧಿಕಾರ ರಾಜಕಾರಣ ಮಾಡಬೇಕು. ಆದರೆ ಆ ಚಳುವಳಿಯಿಂದ ಬಂದವರು ಚುನಾಯಿತರಾದಾಗ, ಅವರ ಮೇಲೆ ಚಳವಳಿ ಅಥವಾ ಸಂಘಟನೆಯ ನಿಯಂತ್ರಣ ಇರಬೇಕು’ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಕೊಂಚ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಮ್ಯುನಿಸ್ಟ್ ಚಳುವಳಿಯ ಹಿನ್ನೆಲೆಯ ಭೀಮನಗೌಡ ಕಾಶಿರೆಡ್ಡಿ. ‘ಚಳುವಳಿ ಹಿನ್ನೆಲೆಯ ಸಂಘಟನೆಗಳು ಅಧಿಕಾರ ರಾಜಕಾರಣ ಅಂದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಇಳಿಯಲೇಬೇಕು. ಆದರೆ ಆ ಚಳವಳಿ/ಸಂಘಟನೆ ಒಂದು ರಾಜಕೀಯ ಪಕ್ಷವಾಗಿ ಘೋಷಿಸಿಕೊಂಡೇ ಮುನ್ನುಗಬೇಕು. ಆದರೆ ರಾಜ್ಯದ ಚಳವಳಿ/ಸಂಘಟನೆಗಳ ಸಮಸ್ಯೆ  ಅಂದರೆ ಯಾರೋ ಒಂದಿಬ್ಬರನ್ನು ಶಾಸಕಾಂಗಕ್ಕೆ ಕಳಿಸಿಬಿಟ್ಟರೆ ಮುಗೀತು ಅನ್ನುವುದು. ಅದು ಪ್ರಾಕ್ಟಿಕಲ್‍ ಆಗಿ ಹಾಗೆ ಆಗಲ್ಲ. ಹೋರಾಟದ ಸಂಘಟನೆ ರಾಜಕೀಯ ಪಕ್ಷವಾಗಿ ಘೋಷಣೆ ಮಾಡಿಕೊಳ್ಳಬೇಕು, ಅದು ಎಲ್ಲ ಪ್ರದೇಶದ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು’ ಎನ್ನುತ್ತಾರೆ. ಚಳವಳಿಯಿಂದ ಆಯ್ಕೆ ಆದವರ ಮೇಲೆ ಸಂಘಟನೆಯ ನಿಯಂತ್ರಣ ಇರಬೇಕು ಎಂಬ ವಾದವನ್ನು ತಿರಸ್ಕರಿಸುವ ಭೀಮನಗೌಡ ಕಾಶಿರೆಡ್ಡಿ, ‘ಈಗ ಆರ್‍ಎಸ್‍ಎಸ್‍ ಎಂಬ ಸಂವಿಧಾನೇತರ ಸಿದ್ಧಾಂತಗಳ ಸಂಘಟನೆ ಸರ್ಕಾರ ನಿಯಂತ್ರಣ ಮಾಡುತ್ತಿದೆ. ಅದೇ ರೀತಿ, ಬೇರೆ ಸಂಘಟನೆಗಳಿಂದ ಬೆಳೆದು ಜನಪ್ರತಿನಿಧಿ ಆದವರನ್ನು ಸಂಘಟನೆಯೇ ನಿಯಂತ್ರಿಸಬೇಕು ಎಂಬುದು ಕೂಡ ಸಂವಿಧಾನದ ಉಲ್ಲಂಘನೆ ಅಲ್ಲವೇ?’ ಎಂದು ಪ್ರಶ್ನಿಸುತ್ತಿದ್ದಾರೆ. ಚಿಂತಕ, ಬರಹಗಾರ ಡಾ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!