Tag: ಚರಕ ಶಪಥ

ಚರಕ ಶಪಥ ವಿವಾದ ; ಡೀನ್‌ಗೆ ಗೇಟ್ ಪಾಸ್ ನೀಡಿದ ತಮಿಳುನಾಡು ಸರ್ಕಾರ

ತಮಿಳುನಾಡಿನ ಮಧುರೈ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಹರ್ಷಿ ಚರಕ ಸಂಹಿತೆಯ ಶಪಥವನ್ನು ಓದುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಡಿಎಂಕೆ ನೇತೃತ್ವದ ಸರ್ಕಾರವು ಕಾಲೇಜಿನ ಡೀನ್’ಗೆ ಗೇಟ್ ಪಾಸ್ ನೀಡಿದೆ. ಈಗಾಗಲೇ, ದಕ್ಷಿಣ ಭಾರತದಲ್ಲಿ ಭಾಷಾ ರಾಜಕಾರಣದ ಬಿಸಿ ತೀವ್ರವಾಗಿದ್ದು, ಇದರ ನಡುವೆ ಸಂಸ್ಕೃತದಲ್ಲಿ ಶಪಥವನ್ನು ಓದಿದ್ದು ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.  ಈ ಕಾರ್ಯಕ್ರಮದಲ್ಲಿ ತಮಿಳುನಾಡಿನ ವಿತ್ತ ಸಚಿವ ಪಳನಿವೇಳ್ ಥಿಯಾಗ ರಾಜನ್ ಹಾಗೂ ವಾಣಿಜ್ಯ ತೆರಿಗೆ ಸಚಿವ ಪಿ ಮೂರ್ತಿ ಅವರು ಕೂಡಾ ಭಾಗವಹಿಸಿದ್ದರು. ವೈದ್ಯಕೀಯ ಕಾಲೇಜಿಗೆ ಭರ್ತಿ ಪಡೆದ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಶಪಥ ಸ್ವೀಕರಿಸಿದ್ದರು.ಸಾಮಾನ್ಯವಾಗಿ ಇಂಗ್ಲೀಷ್’ನಲ್ಲಿ ಹಿಪೊಕ್ರಾಟಿಕ್ ಶಪಥವನ್ನು ಓದುವ ಪದ್ದತಿಯನ್ನು ಕೈಬಿಡಲಾಗಿತ್ತು. ಈ ನಿರ್ಧಾರ ಈಗ ಡೀನ್ ಎ ರಥಿನವೇಲ್ ಅವರ ಕೆಲಸಕ್ಕೂ ಕುತ್ತು ತಂದಿದೆ. ಮುಂದಿನ ಆದೇಶದವರೆಗೂ ಅವರಿಗೆ ಯಾವ ಹುದ್ದೆಯನ್ನೂ ನೀಡಲಾಗಿಲ್ಲ.  ಈ ಕುರಿತಾಗಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಮಾ ಸುಬ್ರಹ್ಮಣ್ಯನ್, ತಮಿಳುನಾಡು ಸರ್ಕಾರವು ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಸಲು ಆದೇಶ ಹೊರಡಿಸಿದೆ. ಈ ಘಟನೆಯು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ನೀತಿ ಮತ್ತು ಆಚಾರ-ವಿಚಾರಗಳನ್ನು ಉಲ್ಲಂಘಿಸುತ್ತದೆ, ಎಂದಿದ್ದಾರೆ.  “ಘಟನೆಯ ಬಳಿಕ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಹಿಂದಿನ ಪದ್ಧತಿಯನ್ನೇ ಮುಂದವರೆಸಲು ಸೂಚಿಸಿ ಪತ್ರವನ್ನು ಬರೆಯಲಾಗಿದೆ. ಈ ಪದ್ಧತಿಯನ್ನು ಕೈಬಿಡಲು ನಮ್ಮ ಸರ್ಕಾರವು ಕಿಂಚಿತ್ತೂ ಒಪ್ಪುವುದಿಲ್ಲ,” ಎಂದು ಹೇಳಿದ್ದಾರೆ.  ಇತ್ತೀಚಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು, ಕಾಲೇಜುಗಳಲ್ಲಿ ಹಿಪೊಕ್ರಾಟಿಕ್ ಓಥ್ ಬದಲು ಚರಕ ಸಂಹಿತೆಯನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿತ್ತು. ಇದನ್ನು ಕೇಂದ್ರ ಆರೋಗ್ಯ ಮಂತ್ರಿ ಮಾನ್ಸುಖ್ ಮಾಂಡವಿಯ ಅವರು ಕೂಡಾ ಪುರಸ್ಕರಿಸಿದ್ದರು. ಅಲ್ಪ ಬದಲಾವಣೆಗಳೊಂದಿಗೆ ಚರಕ ಸಂಹಿತೆಯ ಶಪಥವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಆಯ್ಕೆ ನೀಡಲಾಗಿತ್ತು. ಆದರೆ, ಇದನ್ನು ಕಡ್ಡಾಯಗೊಳಿಸಲಾಗಿರಲಿಲ್ಲ.  ಈ ಬದಲಾವಣೆಯನ್ನು ತಮಿಳುನಾಡು ಸರ್ಕಾರ ಸ್ವೀಕರಿಸಿರಲಿಲ್ಲ. ಈಗಾಗಲೇ, ಹಿಂದಿ, ಸಂಸ್ಕೃತ ಹೇರಿಕೆಯ ವಿರುದ್ಧ ಸಿಡಿದಿದ್ದೆರುವ ಸರ್ಕಾರವು, ಮಧುರೈ ಮೆಡಿಕಲ್ ಕಾಲೇಜಿನ ಘಟನೆಯನ್ನು ಗಂಭಿರವಾಗಿ ಪರಿಗಣಿಸಿದೆ.  ಸರ್ಕಾರ ನೀಡಿದ್ದ ನೋಟಿಸ್’ಗೆ ಉತ್ತರಿಸಿದ್ದ ಡೀನ್ ರಥಿನವೇಲ್, ವಿದ್ಯಾರ್ಥಿ ಸಂಘದ ನಾಯಕ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ರಾಷ್ಟ್ರೀಯ ವೈದ್ಯಕೀಯ ಆಯೋಗದ ವೆಬ್ಸೈಟ್ ನಿಂದ ಚರಕ ಸಂಹಿತೆಯನ್ನು ಪಡೆದುಕೊಂಡಿದ್ದರು. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ, ಈ ವಿವರಣೆಯನ್ನು ಸರ್ಕಾರ ಒಪ್ಪಲು ಸಿದ್ಧವಿರಲಿಲ್ಲ.  ಸಂಸ್ಕೃತದಲ್ಲಿ ಶಪಥ ತೆಗೆದುಕೊಂಡ ವಿಚಾರವನ್ನು ವಿವಾದವಾಗಿ ಪರಿವರ್ತಿಸಿದ್ದು ಬಿಜೆಪಿಯ ಮಿತ್ರಪಕ್ಷವಾದ ಪಿಎಂಕೆ. ಇದರ ನಾಯಕ ಮತ್ತು ಮಾಜಿ ಕೇಂದ್ರ ಆರೋಗ್ಯ ಮಂತ್ರ ಅನ್ಬುಮನಿ ರಾಮದಾಸ್ ಅವರು ಸಂಸ್ಕೃತ ಬಳಕೆಯನ್ನು ತೀವ್ರವಾಗಿ ಖಂಡಿಸಿದ್ದರು. ರಾಜ್ಯದ ಇಬ್ಬರು ಮಂತ್ರಿಗಳು ಹಾಜರಿದ್ದ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದಿದ್ದು ನಿಜಕ್ಕೂ ಆಶ್ಚರ್ಯಕರ. ಆ ಕ್ಷಣದಲ್ಲಿಯೇ ಅದನ್ನು ನಿಯಂತ್ರಿಸಬೇಕಿತ್ತು ಎಂದು ರಾಮದಾಸ್ ಹೇಳಿದ್ದರು. 

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!