ಲಖೀಂಪುರ ಖೇರಿಯತ್ತ ಹೊರಟ ಪ್ರಿಯಾಂಕ, ಅಖಿಲೇಶ್ ಯಾದವ್ ಬಂಧನ
ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾರವು ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆಗಳಿಗೆ ವೇದಿಕೆಯಾಗಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷದ ನಾಯಕರು ಘಟನೆ ನಡೆದ ಸ್ಥಳಕ್ಕೆ ತಲುಪದಂತೆ ಅವರ ಮನೆಯ ಸುತ್ತ ಪೊಲೀಸ್ ಪಹರೆ ಹಾಕಲಾಗಿದೆ. ಇದರ ನಡುವೆಯೂ, ಪೊಲೀಸರ ಕಣ್ತಪ್ಪಿಸಿ ಲಖೀಂಪುರ ಖೇರಿಯೆಡೆಗೆ ಪ್ರಯಾಣ ಬೆಳೆಸಿದ್ದ ಪ್ರಿಯಾಂಕ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಕೇಂದ್ರ ಸರ್ಕಾರದ ಗೃಹ ಇಲಾಖೆಯ ರಾಜ್ಯ ಸಚಿವರಾದ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಅವರಿದ್ದ ತಂಡವು ನಾಲ್ವರು ರೈತರನ್ನು ಹತ್ಯೆಗೈದಿತ್ತು. ಇದೇ ವೇಳೆ ರೈತರ ಮೇಲೆ ಗುಂಡಿನ ದಾಳಿ ಕೂಡಾ ನಡೆಸಲಾಗಿತ್ತು, ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಆರೋಪಿಸಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ರಾಜಕೀಯ ನಾಯಕರು ಲಖೀಂಪುರ ಖೇರಿಯನ್ನು ತಲುಪದಂತೆ ಉತ್ತರ ಪ್ರದೇಶ ಸರ್ಕಾರ ಮುನ್ನಚ್ಚರಿಕೆ ವಹಿಸಿತ್ತು. ಇದರ ಹೊರತಾಗಿಯೂ ಹಲವು ನಾಯಕರು ಘಟನಾ ಸ್ಥಳದತ್ತ ಧಾವಿಸಲು ಆರಂಭಿಸಿದರು. ಪ್ರಿಯಾಂಕ ಗಾಂಧಿಯ ಲಕ್ನೋ ನಿವಾಸದ ಸುತ್ತ ಬಿಗಿ ಬಂದೋಬಸ್ತ್ ಇದ್ದರೂ, ಪೊಲೀಸರ ಕಣ್ತಪ್ಪಿಸಿ ಪ್ರಿಯಾಂಕ ಗಾಂಧಿ ಎರಡು ಕಿ.ಮೀ. ದೂರ ನಡೆದೇ ಕ್ರಮಿಸಿದ್ದಾರೆ. ಅಲ್ಲಿಂದ ಕಾರು ಹತ್ತಿ ಲಖೀಂಪುರ ಖೇರಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೂಡಲೇ ವಿಷಯವನ್ನು ಅರಿತ ಉತ್ತರ ಪ್ರದೇಶ ಪೊಲೀಸರು, ಪ್ರಿಯಾಂಕ ಗಾಂಧಿ ಸೀತಾಪುರ ಗಡಿ ದಾಟುವ ಮುನ್ನವೇ ಅವರನ್ನು ತಡೆದಿದ್ದಾರೆ. ಮೃತರ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟ ಪ್ರಿಯಾಂಕ ಗಾಂಧೀಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆಂದು ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್ ಬಿ ವಿ ಅವರು ಆರೋಪಿಸಿದ್ದಾರೆ. ಇದೇ ವೇಳೆ ತಮ್ಮ ಬಂಧನಕ್ಕೆ ವಾರಂಟ್ ತೋರಿಸಿ ಎಂದು ಪ್ರಿಯಾಂಕ ಗಾಂಧಿ ಮಹಿಳಾ ಕಾನ್ಸಟೇಬಲ್ ಜತೆ ವಾಗ್ವಾದ ನಡೆಸಿರುವ ವೀಡಿಯೋ ಕೂಡಾ ಬಹಿರಂಗವಾಗಿದೆ. https://twitter.com/srinivasiyc/status/1444825390787170308 “ನನ್ನ ಮನೆ ಬಿಟ್ಟು ಹೊರಗೆ ಬಂದು ಯಾವುದೇ ಅಪರಾಧವೆಸಗಿಲ್ಲ. ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಅವರ ದುಖವನ್ನು ಹಂಚಿಕೊಳ್ಳವೇಕೆಂದಿದ್ದೇನೆ. ಇದರಲ್ಲಿ ಏನು ತಪ್ಪಿದೆ? ಏನಾದರೂ ತಪ್ಪಿದ್ದರೆ, ನಿಮ್ಮ ಬಳಿ ವಾರಂಟ್ ಇರಬೇಕಿತ್ತು. ನನ್ನನ್ನು ನನ್ನ ಕಾರನ್ನು ಯಾವುದೇ ಕಾರಣವಿಲ್ಲದೇ ಏಕೆ ತಡೆಯುತ್ತಿದ್ದೀರಾ?” ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಿಯಾಂಕ ಗಾಂಧಿ ಜತೆಗಿದ್ದ ಇತರ ಕಾಂಗ್ರೆಸ್ ಸದಸ್ಯರು ಸ್ಥಳದಲ್ಲಿಯೇ ಧರಣಿ ಕೈಗೊಂಡಿದ್ದಾರೆ. ಪ್ರಿಯಾಂಕ ಗಾಂಧಿಯನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಛತ್ತೀಸ್ ಘಡ ಸಿಎಂ ಭೂಪೇಶ್ ಬಾಘೇಲ್ ಹಾಗೂ ಪಂಜಾಬ್ ಡಿಸಿಎಂ ಸುಖ್ಜಿಂದರ್ ರಾಂಧವಾ ಅವರನ್ನು ಲಕ್ನೋ ಏರ್ಪೋರ್ಟ್’ನಿಂದ ಹೊರ ಬರಲು ಬಿಡದಂತೆ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಆದೇಶ ಹೊರಡಿಸಿದ್ದಾರೆ. ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಿಂದ ತೊಂದರೆಗೆ ಒಳಗಾದವರ ಭೇಟಿಗೆ ಬರುವುದಾಗಿ ಇಬ್ಬರೂ ನಾಯಕರು ಭಾನುವಾರ ಹೇಳಿದ್ದರು. ಬಿ ಎಸ್ ಪಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಮಿಶ್ರಾ ಅವರು ಕೂಡಾ ಭಾನುವಾರ ರಾತ್ರಿಯೇ ಘಟನಾ ಸ್ಥಳಕ್ಕೆ ಹೊರಡಲು ಅನುವಾಗಿದ್ದರು. ಆದರೆ, ಅವರನ್ನು ಕೂಡಾ ಲಕ್ನೋದಲ್ಲಿಯೇ ತಡೆದು ನಿಲ್ಲಿಸಲಾಗಿದೆ. ಅಖಿಲೇಶ್ ಯಾದವ್ ಪ್ರತಿಭಟನೆ, ಬಂಧನ ಲಖೀಂಪುರ ಖೇರಿಗೆ ಹೋಗಲು ಅನುಮತಿ ನೀಡದೇ ತಮ್ಮ ಮನೆಯ ಸುತ್ತ ಪೊಲೀಸರನ್ನು ನಿಯೋಜಿಸಿದ್ದರ ವಿರುದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ನಿವಾಸದ ಮುಂದೆಯೇ ಪ್ರತಿಭಟನೆ ಆರಂಭಿಸಿದ್ದರು. “ರೈತರ ವಿರುದ್ದ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಬ್ರಿಟಿಷರ ದೌರ್ಜನ್ಯಕ್ಕಿಂತಲೂ ಕ್ರೂರವಾಗಿದೆ. ಅಜಯ್ ಮಿಶ್ರಾ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ರಾಜಿನಾಮೆ ನೀಡಲೇಬೇಕು,” ಎಂದು ಅವರು ಆಗ್ರಹಿಸಿದ್ದರು. ಇದರೊಂದಿಗೆ, ಮೃತ ರೈತರ ಕುಟುಂಬಗಳಿಗೆ ರೂ. ಎರಡು ಕೋಟಿ ಪರಿಹಾರ ನೀಡಬೇಕು ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಪ್ರತಿಭಟನೆ ಮುಂದುವರೆಯುತ್ತಿದ್ದಂತೆಯೇ ನೂರಾರು ಜನ ಪಕ್ಷದ ಕಾರ್ಯಕರ್ತರು ಅಖಿಲೇಶ್ ಯಾದವ್ ನಿವಾಸದ ಮುಂದೆ ಜಮಾಯಿಸಲು ಆರಂಭಿಸಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ ಪೊಲೀಸರು ಅಖಿಲೇಶ್ ಯಾದವ್ ಅವರನ್ನು ಬಂಧಿಸಿದ್ದಾರೆ. ಆರೋಪ ನಿರಾಕರಿಸಿದ ಅಜಯ್ ಮಿಶ್ರಾ: ಹಿಂಸಾಚಾರದಲ್ಲಿ ತಮ್ಮ ಮಗನ ಪಾಲ್ಗೊಳ್ಳುವಿಕೆಯನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ನಿರಾಕರಿಸಿದ್ದಾರೆ.“ನನ್ನ ಮಗ ಅಲ್ಲಿದ್ದಿದ್ದರೆ ಜೀವಂತವಾಗಿ ಹೊರ ಬರುತ್ತಿರಲಿಲ್ಲ. ಘಟನಾಸ್ಥಳದಲ್ಲಿದ್ದ ಕೆಲವು ದುಷ್ಕರ್ಮಿಗಳು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಅವರೇ ಕಾರುಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ,” ಎಂದು ಅಜಯ್ ಮಿಶ್ರಾ ಹೇಳಿದ್ದಾರೆ. ಮೊಬೈಲ್ ಸೇವೆ ಬಂದ್: ಹಿಂಸಾಚಾರ ನಡೆದ ಸ್ಥಳಗಳಲ್ಲಿ ಸರ್ಕಾರವು ಮೊಬೈಲ್ ಸೇವೆಯನ್ನು ರದ್ದುಗೊಳಿಸಿದೆ. ಇದರೊಂದಿಗೆ CrPCಯ ಸೆಕ್ಷನ್ 144ನ್ನು ಜಾರಿಗೊಳಿಸಿದೆ. ನಾಲ್ವರಿಂಗಿತ ಹೆಚ್ಚಿನ ಜನರು ಒಂದೆಡೆ ಸೇರುವ ಹಾಗಿಲ್ಲ ಎಂದು ಷರತ್ತು ವಿಧಿಸಿದೆ.
Read moreDetails