Tag: ವಿಪಕ್ಷಗಳು

ವಿಪಕ್ಷಗಳ ಒಕ್ಕೂಟ ರಚನೆ ಕನಸಾಗಿಯೇ ಉಳಿಯುವುದೇ? 

ಕಳೆದ ಕೆಲವು ವರ್ಷಗಳಿಂದ ಆಡಳಿತರೂಢ ಬಿಜೆಪಿಯ ವಿರುದ್ದ ಒಗ್ಗೂಡಲು ವಿಪಕ್ಷಗಳು ಹಲವು ಬಾರಿ ಪ್ರಯತ್ನಿಸಿವೆ. ಅದರಲ್ಲೂ ಕಾಂಗ್ರೆಸ್ ನಾಯಕರು ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿ ಈ ನಿಟ್ಟಿನಲ್ಲಿ ಶ್ರಮಪಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಇಂತಹುದೇ ಪ್ರಯತ್ನಗಳು ನಡೆದಿದ್ದರೂ, ಕೊನೆಯ ಕ್ಷಣಕ್ಕೆ ವಿಪಕ್ಷಗಳಿಗೆ ಈ ಯೋಜನೆಯ ಕುರಿತು ಜ್ಞಾನೋದಯವಾದ್ದರಿಂದ ಎಲ್ಲಾ ಪ್ರಯತ್ನಗಳು ನೀರಿನಲ್ಲಿ ಮಾಡಿದ ಹೋಮದಂತಾದವು.  ಮುಂದಿನ ಲೋಕಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳು ಮಾತ್ರ ಬಾಕಿ ಉಳಿದಿವೆ. ಹಾಗಾಗಿ, ವಿಪಕ್ಷಗಳನ್ನು ಒಗ್ಗೂಡಿಸಲು ಇದು ಸುಸಮಯ ಎಂದು ಎಲ್ಲಾ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಅರಿವಾಗಿದೆ. ಬಿಜೆಪಿ ವಿರುದ್ದ ಒಗ್ಗಟ್ಟಿನಿಂದ ಚುನಾವಣೆ ಎದುರಿಸದಿದ್ದರೆ, ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಈಗಾಗಲೇ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ.  ಇತ್ತೀಚಿನ ಚುನಾವಣೆಗಳಲ್ಲಿ ಅತ್ಯಂತ ಕಳಪೆ ಸಾಧನೆ ತೋರಿರುವ ಕಾಂಗ್ರೆಸ್ ಈಗ ಇಂತಹುದೊಂದು ಪ್ರಯತ್ನಕ್ಕೆ ಮುಂದಡಿಯಿಡುವ ಸೂಚನೆ ನೀಡಿದೆ. ಕಳೆದ ವಾರ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆ ಇದಕ್ಕೆ ಪೂರಕವಾಗಿದೆ. ಆರ್ ಜೆ ಡಿ ನಾಯಕ ಶರದ್ ಯಾದವ್ ಅವರನ್ನು ಭೇಟಿಯಾದ ಬಳಿಕ ರಾಹುಲ್ ಒಗ್ಗಟ್ಟಿನ ಮಂತ್ರ ಜಪಿಸಲು ಆರಂಭಿಸಿದ್ದಾರೆ.  “ಆರ್ಎಸ್ಎಸ್ ಹಾಗೂ ನರೇಂದ್ರ ಮೋದಿಯ ವಿರುದ್ದ ಇರುವ ವಿಪಕ್ಷಗಳು ಒಗ್ಗೂಡಬೇಕು. ಯಾವ ರೀತಿ ಒಗ್ಗೂಡಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ತಾಳುವ ತೀರ್ಮಾಣಗಳನ್ನು ಕಾರ್ಯರೂಪಕ್ಕೆ ಇಳಿಸಬೇಕು,” ಎಂದು ಹೇಳಿದ್ದಾರೆ.  ಈ ಒಗ್ಗಟ್ಟಿನ ಮಂತ್ರದ ಹಿಂದೆ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷದ ಪುನರುಜ್ಜೀವನದ ಯೋಜನೆಯೂ ಅಡಗಿರುವ ಸಾಧ್ಯತೆಗಳಿವೆ. ಈಗಾಗಲೇ, ಬಿಜೆಪಿ ಹಾಗೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮಂತ್ರಿಗಳು ಕಾಂಗ್ರೆಸ್ ವಿರುದ್ಧ ಹಾಗೂ ಗಾಂಧಿ ಕುಟುಂಬದ ವಿರುದ್ದ ನಿರಂತರವಾಗಿ ಟೀಕಾಪ್ರಹರ ನಡೆಸುತ್ತಿದೆ. ಆಡಳಿತ ಪಕ್ಷಕ್ಕೆ ಪ್ರಶ್ನೆ ಕೇಳಬೇಕಿದ್ದ ಕಾಂಗ್ರೆಸ್, ಉತ್ತರ ನೀಡುವಲ್ಲಿಯೇ ನಿರತವಾಗಿದೆ. ಇಂತಹ ಹಂತದಲ್ಲಿ ‘ಸಮಾನ ಮನಸ್ಸಿನ’ ವಿಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿಯ ವಿರುದ್ಧ ದಿಟ್ಟವಾದ ಪ್ರತಿರೋಧ ಒಡ್ಡಲು ಕಾಂಗ್ರೆಸ್’ಗೆ ಸಾಧ್ಯವಾಗಬಹುದೇ ಎಂಬುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.  ವಿಪಕ್ಷಗಳ ಒಕ್ಕೂಟಕ್ಕೆ ನೇತೃತ್ವ ವಹಿಸಿಕೊಳ್ಳಲು ಈಗಾಗಲೇ ಮಮತಾ ಬ್ಯಾನರ್ಜಿ ಅತ್ಯುತ್ಸಾಹ ತೋರಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ, ದೇಶಾದ್ಯಂತ ಸಂಚರಿಸಿ ಎಲ್ಲಾ ರಾಜಕೀಯ ಮುಖಂಡರನ್ನು ಭೇಟಿಯಾಗಿ ತಮ್ಮ ಯೋಜನೆಯ ಕುರಿತು ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್’ನ ಬೆಂಬಲವಿಲ್ಲದೆ ತೃತೀಯ ರಂಗದ ರಚನೆಗೂ ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ಕುರಿತ ಸೂಚನೆ ನೀಡುವ ಹೇಳಿಕೆಯನ್ನು ದೀದಿ ನೀಡಿದ್ದಾರೆ.  “ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂಬ ಹಗಲು ಕನಸು ಕಾಣುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಜನ ವಿಶ್ವಾಸವನ್ನು ಕಳೆದುಕೊಂಡಿದೆ. ಹೀಗಾಗಿ ಉಳಿದ ರಾಜಕೀಯ ಪಕ್ಷಗಳು ಒಗ್ಗೂಡಬೇಕಾದ ಅನಿವಾರ್ಯತೆ ಒದಗಿದೆ. ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಇನ್ನು ಪ್ರಯೋಜನವಿಲ್ಲ. ಕಾಂಗ್ರೆಸ್ ಬಯಸಿದರೆ ಅವರೂ ನಮ್ಮ ಜತೆ ಸೇರಬಹುದು,” ಎಂದು ಸೂಚ್ಯವಾಗಿ ತೃತೀಯ ರಂಗ ರಚನೆಯ ಕುರಿತು ಮಾತನಾಡಿದ್ದಾರೆ.  ವಿಪಕ್ಷಗಳ ಒಕ್ಕೂಟ ರಚನೆಯ ಕುರಿತು ಮಾತನಾಡಿದವರು ಕೇವಲ ಇವರಿಬ್ಬರೇ ಅಲ್ಲ. ದಕ್ಷಿಣ ಭಾರತದ ಅತ್ಯಮತ ಪ್ರಭಾವಿ ರಾಜಕಾರಣಿಗಳಾದ ಡಿಎಂಕೆಯ ಸ್ಟಾಲಿನ್ ಹಾಗೂ ಟಿ ಆರ್ ಎಸ್ ಪಕ್ಷದ ಕೆ ಚಂದ್ರಶೇಖರ್ ರಾವ್ ಕೂಡ ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.  ಕೆಸಿಆರ್ ಅವರು ಈಗಾಗಲೇ ತಮ್ಮ ಪ್ರಯತ್ನವನ್ನು ಆರಂಭಿಸಿದ್ದು ಹೆಚ್ ಡಿ ದೇವೇಗೌಡ, ಜಾರ್ಖಂಡ್ ನ ಹೇಮಂತ್ ಸೊರೆನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಉದ್ದವ್ ಠಾಕ್ರೆಯನ್ನು ಈಗಾಗಲೇ ಸಂಪರ್ಕಿಸಿರುವ ಕುರಿತು ವರದಿಗಳು ಪ್ರಕಟವಾಗಿವೆ. ಕಳೆದ ಒಂದು ತಿಂಗಳಿನಿಂದ ದೆಹಲಿಯನ್ನೇ ತಮ್ಮ ಕೇಂದ್ರಸ್ಥಾನವಾಗಿಸಿರುವ ಕೆಸಿಆರ್, ತೃತೀಯ ರಂಗದ ರಚನೆ ಕುರಿತಾಗಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷವನ್ನೂ ತೃತೀಯ ರಂಗದೊಂದಿಗೆ ಜತೆಗೂಡಿಸುವ ಕುರಿತು ಕೆಸಿಆರ್ ಪ್ರಯತ್ನಪಟ್ಟಿದ್ದಾರೆ.  ಅತ್ಯಂತ ಪ್ರಮುಖವಾಗಿ, ಕೇವಲ ಒಡಿಶಾ ಕೇಂದ್ರಿತ ರಾಜಕಾರಣದಲ್ಲಿ ನಿರತರಾಗಿರುವ ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ ಬೆಂಬಲವನ್ನು ಪಡೆಯುವ ಪ್ರಯತ್ನವನ್ನೂ ಕೆಸಿಆರ್ ಮಾಡಿದ್ದಾರೆ.  ಇನ್ನು, ಕೇರಳದಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ವಿಚಾರ ಸಂಕಿರಣದಲ್ಲಿ ಭಾಗಿಯಾದ ತಮಿಳುನಾಡು ಸಿಎಂ ಸ್ಟಾಲಿನ್, ವಿಪಕ್ಷಗಳ ಒಕ್ಕೂಟ ರಚನೆಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ವಿಪಕ್ಷಗಳ ಒಕ್ಕೂಟವನ್ನು ಮುನ್ನಡೆಸಲು ಸ್ಟಾಲಿನ್ ಸಮರ್ಥರು ಎಂದು ಕಮ್ಯುನಿಸ್ಟ್ ಪಕ್ಷದ ಸೀತಾರಾಮ್ ಯೆಚೂರಿ ಅವರು ಬಹಿರಂಗವಾಗಿ ಹೇಳಿದ್ದರು.  ಇದೇ ವಿಚಾರವನ್ನು ಕಮ್ಯುನಿಸ್ಟ್ ಪಕ್ಷದ ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಿದ ಸ್ಟಾಲಿನ್, ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಅತ್ಯಂತ ಪ್ರಬಲವಾದ ಪ್ರತಿರೋಧವನ್ನು ಒಡ್ಡಬೇಕಾಗಿದೆ. ರಾಜ್ಯದ ಆಡಳಿತ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ನಿಲ್ಲಿಸಬೇಕು ಎಂದು ಅವರು ಬಿಜೆಪಿಯ ವಿರುದ್ದ ತೀವ್ರವಾದ ಟೀಕಾಪ್ರಹಾರ ನಡೆಸಿದ್ದಾರೆ.  ಹೀಗೆ, ಉತ್ತರದಿಂದ ದಕ್ಷಿಣದವರೆಗೆ ಹಲವು ನಾಯಕರು ಬಿಜೆಪಿಯ ವಿರುದ್ಧ ಒಕ್ಕೂಟ ರಚಿಸಬೇಕೆಂಬ ಕುರಿತು ಚಿಂತನೆ ನಡೆಸಿದ್ದಾರೆ. ಆದರೆ, ಈ ಒಕ್ಕೂಟದ ನೇತೃತ್ವವನ್ನು ಯಾರು ವಹಿಸಲಿದ್ದಾರೆ ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ. ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ, ಕೆಸಿಆರ್, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಸ್ಟಾಲಿನ್, ಪಿನರಾಯಿ ವಿಜಯನ್ ನಂತಹ ಬಲಿಷ್ಟ ನಾಯಕರು ಈ ಕುರಿತಾಗಿ ಒಮ್ಮತದ ಅಭಿಪ್ರಾಯವನ್ನು ತಾಳುವವರೆಗೆ ವಿಪಕ್ಷಗಳ ಒಕ್ಕೂಟ ರಚನೆ ಕನಸಾಗಿಯೇ ಉಳಿಯಲಿದೆ ಎಂಬುದು ಸ್ಪಷ್ಟವಾದ ವಿಚಾರ.

Read more

ಕಾಶ್ಮೀರಿ ಪಂಡಿತರ ಪುನರ್ವಸತಿ : ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷಗಳು

ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಕಾಶ್ಮೀರಿ ಪಂಡಿತರ ವಿಚಾರವಾಗಿ ಆಡಳಿತರೂಢ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತಂದು ...

Read more

ಮತ ಎಣಿಕೆ : ಮಧ್ಯಪ್ರವೇಶಿಸಲು ಸುಪ್ರೀಂ ನಕಾರ ; ವಿಪಕ್ಷಗಳಿಂದ ಅಕ್ರಮದ ಆರೋಪ

ಅತ್ತ ಮತ ಎಣಿಕೆಯ ವೇಳೆ ವಿವಿಪ್ಯಾಟ್ ಸ್ಲಿಪ್ ಗಳನ್ನು ಎಣಿಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಸುಪ್ರೀಂ ಕೋಟ್ ತಿರಸ್ಕರಿಸಿದೆ. ಇತ್ತ ಅಖಿಲೇಶ್ ಯಾದವ್ ಇವಿಎಂ ಕಳ್ಳತನದ ಆರೋಪ ...

Read more

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!