ಮೈಸೂರಿನ ಬಾಬುನಾಯಕ್ ಅವರು ಮಲೈ ಮಹಾದೇಶ್ವರ (Male Madeshwara) ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಪ್ರೊ.ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಸ್ವಪ್ನಮಂಟಪ’ ಕನ್ನಡ ಚಿತ್ರವು ಇದೇ ಜುಲೈ ತಿಂಗಳ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನೇಕ ಸದಭಿರುಚಿ ಚಿತ್ರಗಳನ್ನು ಬಿಡುಗಡೆ ಮಾಡಿರುವ ಮಾರ್ಸ್ ಸುರೇಶ್ ಅವರು ತಮ್ಮ ಸಂಸ್ಥೆಯಿಂದ ‘ಸ್ವಪ್ನಮಂಟಪ’ವನ್ನು ತೆರೆಗೆ ತರುತ್ತಿದ್ದಾರೆ.

‘ಸ್ವಪ್ನಮಂಟಪ’ವು ಬರಗೂರರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ಕಥಾ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವ ಮತ್ತು ಅನೇಕ ತಿರುವುಗಳನ್ನು ಒಳಗೊಂಡಿರುವ ಕಥಾವಸ್ತು ಈ ಚಿತ್ರದಲ್ಲಿದೆ.

ಈ ಚಿತ್ರವು ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ.
ಬರಗೂರರೇ ತಮ್ಮ ಕಥಾವಸ್ತುವಿಗೆ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ನಾಯಕ-ನಾಯಕಿಯಾಗಿ ವಿಜಯರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರದಲ್ಲಿ ಇರುವುದು ಒಂದು ವಿಶೇಷ. ಜೊತೆಗೆ ಸುಂದರರಾಜ್(sundar raj), ಶೋಭಾ ರಾಘವೇಂದ್ರ(shobha Raghavendra), ರಜನಿ(rajani), ಸುಂದರರಾಜ ಅರಸು(Sundararaj Arasu), ಅಂಬರೀಶ್ ಸಾರಂಗಿ(Ambarish Sarangi), ರಾಜಪ್ಪ ದಳವಾಯಿ(Rajappa Dalavayi), ವೆಂಕಟರಾಜು(Venkataraj), ಉಮ್ಮತ್ತೂರು ಬಸವರಾಜು(Ummattur Basavaraj), ಶಿವಲಿಂಗ ಪ್ರಸಾದ್(Shivaling Prasad), ಮೈಸೂರು ಮಂಜುಳ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ (Shamitha Malnad) ಸಂಗೀತ ನಿರ್ದೇಶನ, ತ್ರಿಭುವನ್ (Tribhuvan) ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ (Hosmane Murthy) ಕಲಾವಿನ್ಯಾಸ, ನಟರಾಜ್‍ಶಿವು (Nataraj Shivu) ಮತ್ತು ಪ್ರವೀಣ್(Praveen), ಸಹ ನಿರ್ದೇಶನ ಈ ಚಿತ್ರಕ್ಕಿದೆ. ಸಹ ನಿರ್ಮಾಪಕರು ಎಚ್.ಪಿ. ಕವಿತಾ.