ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬರೋಬ್ಬರಿ 135 ಸ್ಥಾನಗಳ ಜೊತೆಗೆ ಕಾಂಗ್ರೆಸ್ ಬೆಂಬಲಿತ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಸೇರಿ 136 ಸ್ಥಾನಗಳನ್ನು ಹೊಂದಿದೆ. ಸುಭದ್ರ ಸರ್ಕಾರದಲ್ಲಿ 5 ವರ್ಷ ಪೂರ್ಣ ಸರ್ಕಾರ ನಡೆಸುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಬಲ ನಾಯಕರಾಗಿದ್ದರೂ ಅಧಿಕಾರಕ್ಕಾಗಿ ಪಕ್ಷದೊಳಗೆ ಕಿತ್ತಾಡುತ್ತಿದ್ದರೂ ಮೇಲ್ನೋಟಕ್ಕೆ ಮಾತ್ರ ನಾವಿಬ್ಬರು ಒಂದೇ.. ನಮ್ಮಿಬ್ಬರಲ್ಲಿ ಯಾವುದೇ ಒಡಕು ಇಲ್ಲ ಎಂದು ತೋರಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ಒಗ್ಗಟ್ಟು ರಾಜಕೀಯವಾಗಿ ಯಾವುದೇ ನಷ್ಟವಾಗದೆ ಲಾಭವನ್ನೇ ಉಂಟು ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜಕಾರಣ ಬದಲಾಗುವ ಸನ್ನಿವೇಶ ಸೃಷ್ಟಿಯಾಗುವ ಶಂಕೆ ಗೋಚರವಾಗ್ತಿದೆ.

ಸಿದ್ದರಾಮಯ್ಯ ವಿರುದ್ಧವೇ ಗುಡುಗಿದ ಹರಿಪ್ರಸಾದ್..!
ಸಿಎಂ ಸಿದ್ದರಾಮಯ್ಯ ವಿರುದ್ಧ ಹಾಲಿ ಪರಿಷತ್ ಸದಸ್ಯರಾಗಿರುವ ಬಿ.ಕೆ ಹರಿಪ್ರಸಾದ್ ವಾಕ್ಪ್ರಹಾರ ಮಾಡಿದ್ದಾರೆ. ಸಮಾಜವಾದ ಹೆಸರೇಳಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಸಮಾನ ಮನಸ್ಕರ ವೇದಿಕೆಯಲ್ಲಿ ಮಾತನಾಡಿದ ಹರಿಪ್ರಸಾದ್, ‘ಪಂಚೆ ಹಾಕಿಕೊಂಡು, ಹ್ಯೂಬ್ಲೋಟ್ ವಾಚ್ ಕಟ್ಟಿಕೊಳ್ತಾರೆ. ಇವರನ್ನ ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ. ಇವರೆಲ್ಲಾ ಸಮಾಜವಾದಿ ನಾಯಕರು ಅಲ್ಲ, ಮಜವಾದಿಗಳು ಎಂದು ಗುಡುಗಿದ್ದಾರೆ. ಸಿದ್ದರಾಮಯ್ಯ ಅವರ ಹೆಸರನ್ನು ಹರಿಪ್ರಸಾದ್ ಉಲ್ಲೇಖ ಮಾಡಿಲ್ಲ. ಆದರೂ ಯಾರೋ ಗಿಫ್ಟ್ ಮಾಡಿದ್ದ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು ವಿಚಾದ ಸೃಷ್ಟಿಸಿಕೊಂಡಿದ್ದು ಸಿದ್ದರಾಮಯ್ಯ ಅವರೇ ಅನ್ನೋದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳುತ್ತಾರೆ.

ದಲಿತ ವಿರೋಧಿ ಸಿದ್ದರಾಮಯ್ಯ ಎಂದು ಕೆಣಕಿದ ಹರಿಪ್ರಸಾದ್!
ಸಿದ್ದರಾಮಯ್ಯ ವಿರುದ್ಧ ನೇರ ಆರೋಪದ ಬದಲು ಪರೋಕ್ಷವಾಗಿ ವಾಕ್ಸಮರ ನಡೆಸಿದ್ದು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಾದಾಗ ಜೆಡಿಎಸ್ ಜೊತೆಗೆ ಮೈತ್ರಿ ಸರ್ಕಾರ ರಚನೆ ಮಾಡಲಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೆ ಡಾ ಜಿ ಪರಮೇಶ್ವರ್ ಅವರು ಡಿಸಿಎಂ ಆಗಿ ಅಧಿಕಾರ ಹೊಂದಿದ್ದರು. ಆದರೆ ಪರಮೇಶ್ವರ್ ಅವರಿಗೆ ಸಿಎಂ ಆಗುವ ಅವಕಾಶ ಇತ್ತು. ಆದರೆ ಪರಮೇಶ್ವರ್ ಅವರಿಗೆ ಉದ್ದೇಶಪೂರ್ವಕವಾಗಿ ತಪ್ಪಿಸಿದ್ರು ಎಂದಿದ್ದು, ಡಿಸಿಎಂ ಸ್ಥಾನ ಪಡೆದಿದ್ದ ಪರಮೇಶ್ವರ್ ಅವರಿಗೆ ಅದನ್ನೂ ತೆಗೆಸಿದ್ರು ಎನ್ನುವ ಮೂಲಕ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಬೀಳಿಸಿದ್ದು ಎಂದು ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ, ಇನ್ನು ಈ ಹಿಂದಿನ ಯಾವ ಸಿಎಂಗಳೂ ಜಾತಿ ರಾಜಕಾರಣ ಮಾಡಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿ.ಕೆ ಹರಿಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

ಹರಿಪ್ರಸಾದ್ಗೆ ಇಷ್ಟೊಂದು ಶಕ್ತಿ ಕೊಟ್ಟವರು ಯಾರು..?
ಸಿಎಂ ಸಿದ್ದರಾಮಯ್ಯ ವಿರುದ್ಧವೇ ಬಿ.ಕೆ ಹರಿಪ್ರಸಾದ್ ಸಮಾನ ಮನಸ್ಕರ ಹೆಸರಲ್ಲಿ ಪಕ್ಷಾತೀತವಾಗಿ ಸಭೆ ಸೇರಿಸಿ, ಸಿದ್ದರಾಮಯ್ಯ ವಿರುದ್ಧ ಬಾಣಗಳ ಸುರಿಮಳೆ ಮಾಡಿದ್ದಾರೆ. ಆದರೆ ಬಿ.ಕೆ ಹರಿಪ್ರಸಾದ್ಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೆಟೆದು ನಿಲ್ಲುವುದಕ್ಕೆ ಶಕ್ತಿ ಬಂದಿದ್ದು ಎಲ್ಲಿಂದ ಎನ್ನುವ ಪ್ರಶ್ನೆ ಉದ್ಬವ ಆಗುತ್ತದೆ. ಈ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ವಿರುದ್ಧ ನೇರವಾಗಿ ವಾಗ್ದಾಳಿ ಮಾಡಿದ್ದ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಂದು ಮಾತನ್ನು ಹೇಳಿದ್ದರು. ಬಿಜೆಪಿಯಲ್ಲಿ ಅಧ್ಯಕ್ಷರು ಶಕ್ತಿ ಕಳೆದುಕೊಂಡಿದ್ದಾರೆ. ಯತ್ನಾಳ್ ಬಾಯಿಗೆ ಬಂದಂತೆ ಆರಅಓಪ ಮಾಡಿದರೂ ಕಿತ್ತು ಬಿಸಾಡುವ ಕೆಲಸ ಮಾಡಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಆಗಿದ್ದರೆ ಪಕ್ಷದಿಂದಲೇ ಉಚ್ಛಾಟನೆ ಮಾಡುತ್ತಿದ್ದೆ ಎಂದಿದ್ದರು. ಆದರೆ ಈ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಇನ್ನು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೆಲ್ಲವನ್ನು ನೋಡಿದಾಗ ಹರಿಪ್ರಸಾದ್ ಶಕ್ತಿ ಯಾರೆಂದು ಊಹೆ ಮಾಡಬಹುದಾಗಿದೆ.

ಕೃಷ್ಣಮಣಿ






