ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(B. S Yediyurappa) ವಿರುದ್ಧದ ಫೊಕ್ಸೋ ಪ್ರಕರಣಕ್ಕೆ ಸುಪ್ರೀಂಕೋರ್ಟ್(Supreme court) ಮಧ್ಯಂತರ ತಡೆ ನೀಡಿದೆ. ಇದರಿಂದ ಪ್ರಕರಣ ಸಂಬಂಧ ಇಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಫೊಕ್ಸೋ ಪ್ರಕರಣದಲ್ಲಿ (Pocso Case) ವಿಚಾರಣಾಧೀನ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿದ್ದ ಬಿ.ಎಸ್.ಯಡಿಯೂರಪ್ಪ ಅರ್ಜಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೆ ಡಿ.2ರಂದು(ಇಂದು) ವಿಚಾರಣೆಗೆ ಖುದ್ದು ಹಾಜರಾಗಲು ಯಡಿಯೂರಪ್ಪ ಸೇರಿದಂತೆ ಇನ್ನಿತರ ಇಬ್ಬರು ಆರೋಪಿಗೆ 1ನೇ ತ್ವರಿತ ನ್ಯಾಯಾಲಯ ಸಮನ್ಸ್ ನೀಡಿತ್ತು.

ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಅರ್ಜಿ ಸಂಬಂಧ ಇಂದೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಯಡಿಯೂರಪ್ಪ ಪರ ವಕೀಲರಾದ ಸಿದ್ಧಾರ್ಥ್ ಲೂತ್ರಾ ಮತ್ತು ಸಿದ್ಧಾರ್ಥ್ ದವೆ, ಹೈಕೋರ್ಟ್ ಫೆ.7, 2025 ರಂದು ಹೊರಡಿರೋ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಿಂದಿನ ಸುತ್ತಿನ ತೀರ್ಪಿನ ಕಾರಣ ನೀಡಿ ಹೈಕೋರ್ಟ್ ಪರಿಗಣಿಸಿಲ್ಲ. ಬಿ.ಎಸ್.ಯಡಿಯೂರಪ್ಪ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಿಲ್ಲ. 88 ವರ್ಷದ ವ್ಯಕ್ತಿ, 4 ಬಾರಿ ಸಿಎಂ ಆಗಿರುವವರು ರಾಜಕೀಯ ಸೇಡಿನಿಂದ ಬಳಲುತ್ತಿದ್ದಾರೆ ಎಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಹತೆಯ ಆಧಾರದ ಮೇಲೆ ಅರ್ಜಿಯನ್ನ ಹೊಸದಾಗಿ ಪರಿಗಣನೆಗಾಗಿ ಹೈಕೋರ್ಟ್ ಗೆ ಹಿಂತಿರುಗಿಸಬಾರದೇಕೆ ಎಂದು ಪ್ರತಿವಾದಿಗಳಿಗೆ ಪ್ರಶ್ನೆ ಮಾಡಿ ಸಿಐಡಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆ ಮುಂದಿನ ವಿಚಾರಣೆವರೆಗೂ ಪ್ರಕರಣಕ್ಕೆ ತಡೆ ನೀಡಿದೆ.












