ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ(Vijayapura )ನಗರ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಮುಖಭಂಗವಾಗಿದೆ.

ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಮುಶ್ರೀಫ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕಲಬುರಗಿ ಪೀಠವು ಹೈಕೋರ್ಟ್ 2025ರ ಜುಲೈ 18ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಜೊತೆಗೆ ಅರ್ಜಿದಾರರಿಗೆ ದಂಡವನ್ನೂ ವಿಧಿಸಿತ್ತು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಶ್ರೀಫ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು, ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸ್ಥಾನಕ್ಕೆ ಸಂಬಂಧಿಸಿದ ಅನುಮಾನಗಳು ದೂರವಾಗಿವೆ.

ಈ ಬಗ್ಗೆ ಖುಷಿ ಹಂಚಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿ ದಾಖಲು ಮಾಡಿದ್ದ ಅಬ್ದುಲ್ ಹಮೀದ್ ಖಾಜಾ ಎಂಬುವವರ ಅರ್ಜಿಯನ್ನು ಕಲ್ಬುರ್ಗಿ ಉಚ್ಚ ನ್ಯಾಯಾಲಯವು ದಿನಾಂಕ 18.07.2025 ರಂದು ವಜಾ ಮಾಡಿತ್ತು ಹಾಗೂ ಅರ್ಜಿದಾರರಿಗೆ ದಂಡ ವಿಧಿಸಿತ್ತು.

ಉಚ್ಚ ನ್ಯಾಯಾಲಯದ ತೀರ್ಪನ್ನು ಖಾಜಾ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.ಸರ್ವೋಚ್ಛ ನ್ಯಾಯಾಲಯವು ಇವರ ಅರ್ಜಿಯನ್ನು [CIVIL APPEAL No. 12194 OF 2024] ವಜಾ ಮಾಡಿತ್ತು, ಹಾಗೂ ದಂಡವನ್ನೂ ವಿಧಿಸಿತ್ತು. ಈ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿಮರ್ಶೆ ಮಾಡಲು (Review Petition) ಮತ್ತೊಮ್ಮೆ ಅರ್ಜಿ ಸಲ್ಲಿಸಿ , ರಾಜಕೀಯವಾಗಿ ಲಾಭ ಪಡೆಯಬೇಕೆಂದು ಮಾಡಿದ್ದ ಷಡ್ಯಂತ್ರಕ್ಕೆ ಮುಖಭಂಗ ಆಗಿದೆ.
ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಗೊಳಿಸಿದೆ. ಈ ರೀತಿಯಾದ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ ಹಾಗೂ ನನ್ನ ಮೇಲೆ ರಾಜಕೀಯ ಪ್ರೇರಿತ, ಆಧಾರರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಂಡು ಅದನ್ನು ತಾರ್ಕಿಕ ಅಂತ್ಯದ ವರೆಗೂ ಕೊಂಡೊಯುತ್ತೇನೆ.

ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ನನ್ನೊಂದಿಗೆ ಸದಾ ಇರುತ್ತಾರೆ ಹಾಗೂ ಅವರ ಆಶಿರ್ವಾಯಾದ ನನ್ನ ಮೇಲೆ ಸದಾ ಇರುತ್ತದೆ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ಈ ರಾಜಕೀಯ ನಿರುದ್ಯೋಗಿಗಳಿಗೆ ನ್ಯಾಯಾಲಯ ದಂಡ ವಿಧಿಸುವ ಮೂಲಕ ಕ್ರಮ ಜರುಗಿಸಿದೆ ಎಂದು ಯತ್ನಾಳ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.






