ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂಬಂಧ ಕೇಂದ್ರ ಚುನಾವಣಾ ಆಯೋಗವು ಫೆ 26 ರಂದು ದಿನಾಂಕವನ್ನು ನಿಗದಿ ಮಾಡಿ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಲಾಗಿತ್ತು. ಚುನಾವಣಾ ಆಯೋಗದ ಈ ನಿರ್ಧಾರವನ್ನು ಪ್ರಶ್ನಿಸಿ ವಕೀಲ ಎಂ ಎಲ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾರ್ಚ್ 9 ರಂದು ಕೋರ್ಟ್ ವಜಾಗೊಳಿಸಿದೆ.
ನಾವು ನಿಮ್ಮ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ ನಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ತಿಳಿಸಿದೆ.

ಅರ್ಜಿಯಲ್ಲಿ 14 ನೇ ವಿಧಿ ಮತ್ತು 21 ನೇ ವಿಧಿ ಉಲ್ಲಂಘನೆಯಾಗುತ್ತಿರುವುದರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವಂತೆ ಕೋರಿ ವಕೀಲ ಎಂ ಎಲ್ ಶರ್ಮಾ ಮನವಿ ಸಲ್ಲಿಸಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ವೇಳೆ ಜೈ ಶ್ರೀರಾಮ್ ಸೇರಿದಂತೆ ಇತರೆ ಧಾರ್ಮಿಕ ಘೋಷಣೆಗಳು ಕೇಳಿಬರುತ್ತಿದ್ದು, ಈ ವಿಚಾರ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ಕೂಡ ಕೇಂದ್ರ ತನಿಖಾ ದಳಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.
ಜೈರಾಮ್ ಘೋಷಣೆ ಸೇರಿದಂತೆ ಇತರೆ ಧಾರ್ಮಿಕ ಘೋಷಣೆಗಳು ಜನರಲ್ಲಿ ಅಸಂಗತತೆ ಸೃಷ್ಟಿ ಮಾಡುತ್ತವೆ ಮತ್ತು ಪ್ರಚೋದನಾಕಾರಿ ಧಾರ್ಮಿಕ ಘೋಷಣೆಗಳನ್ನು ಚುನಾವಣಾ ಲಾಭಕೋಸ್ಕರ ಬಳಸಲಾಗುತ್ತದೆ. ಇದು ಭಾರತೀಯ ದಂಡಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ 1951 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.







