ವಿವಾಹೇತರ ಗರ್ಭಧಾರಣೆಯು ಅಪಾಯಕಾರಿಯಾಗಿದೆ. ಆದ್ದರಿಂದ ಅತ್ಯಾಚಾರ ಸಂತ್ರಸ್ತೆಗೆ ತಮ್ಮ 27 ವಾರಗಳ ಭ್ರೂಣ ತೆಗೆಸಲು (ಗರ್ಭಪಾತಕ್ಕೆ) ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 21) ಅನುಮತಿ ನೀಡಿ ಆದೇಶಿಸಿದೆ.
ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾ. ಬಿ.ವಿ. ನಾಗರತ್ನಾ ಮತ್ತು ನ್ಯಾ.ಉಜ್ಜಲ್ ಭುಯಾನ್ ಅವರಿದ್ದ ಪೀಠ, ಗುಜರಾತ್ ಹೈಕೋರ್ಟ್ ಗರ್ಭಪಾತಕ್ಕೆ ನಿರಾಕರಿಸಿರುವುದು ಸರಿಯಲ್ಲ ಎಂದು ಹೇಳಿದೆ.
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿನ ವಿವಾಹ ಚೌಕಟ್ಟಿನಲ್ಲಿ ಗರ್ಭಧರಿಸುವುದು ಕೇವಲ ದಂಪತಿಗಳಿಗೆ ಮಾತ್ರವಲ್ಲ, ಅದು ಕುಟುಂಬ ಮತ್ತು ಸ್ನೇಹಿತರಿಗೂ ಸಂತಸದ ಸಂಗತಿ ಎಂದು ಪೀಠ ಅಭಿಪ್ರಾಯಪಟ್ಟಿದೆ.
“ವಿವಾಹೇತರ ಗರ್ಭಾವಸ್ಥೆಯು ಅಪಾಯಕಾರಿ. ಅದರಲ್ಲೂ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಅದು ಸಂತ್ರಸ್ತೆಗೆ ಆಘಾತ, ಮಾನಸಿಕ ಮತ್ತು ದೈಹಿಕ ಒತ್ತಡ ಉಂಟುಮಾಡುತ್ತದೆ. ಲೈಂಗಿಕ ದೌರ್ಜನ್ಯವು ಯಾತನಾದಾಯಕವಾದದ್ದು ಮತ್ತು ಗರ್ಭಾವಸ್ಥೆಯಲ್ಲಿ ಕೇಳುಬರುವ ನಿಂದನೆಗಳು ಘಾಸಿಗೊಳಿಸುತ್ತವೆ. ಏಕೆಂದರೆ ಇಂತಹ ಗರ್ಭಾವಸ್ಥೆಯು ಸ್ವಯಂಪ್ರೇರಿತವಾಗಿರುವುದಿಲ್ಲ” ಎಂದು ಹೇಳಿದೆ.
“ಚರ್ಚೆ ಮತ್ತು ವೈದ್ಯಕೀಯ ವರದಿಗಳನ್ನು ಪರಿಗಣಿಸಿ, ಸಂತ್ರಸ್ತೆಗೆ ಗರ್ಭಪಾತಕ್ಕೆ ಅನುಮತಿ ನೀಡುತ್ತಿದ್ದೇವೆ. ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಲು ನಾಳೆ ಆಸ್ಪತ್ರೆಗೆ ಹಾಜರಾಗುವಂತೆ ನಿರ್ದೇಶನ ನೀಡುತ್ತಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
ಒಂದು ವೇಳೆ ಭ್ರೂಣ ಬದುಕುಳಿಯುವ ಸಾಧ್ಯತೆ ಕಂಡುಬಂದರೆ, ಅದನ್ನು ಉಳಿಸಿಕೊಳ್ಳಲು ಇನ್ಕ್ಯೂಬೇಷನ್ ಸೇರಿದಂತೆ ಸೂಕ್ತ ಕ್ರಮಗಳನ್ನು ಆಸ್ಪತ್ರೆ ಕೈಗೊಳ್ಳಬೇಕು. ಭ್ರೂಣ ಉಳಿದರೆ, ಕಾನೂನಿನ ಪ್ರಕಾರ ರಾಜ್ಯ ಸರ್ಕಾರ ಮಗುವನ್ನು ದತ್ತು ಪಡೆಯಲಿದೆ ಎಂದೂ ತಿಳಿಸಿದೆ.
“ಸಂತ್ರಸ್ತೆಯೊಬ್ಬರು ಗರ್ಭಪಾತಕ್ಕಾಗಿ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಮುಂದೂಡಿರುವ ಬಗ್ಗೆ ಶನಿವಾರ ನಡೆಸಿದ ವಿಶೇಷ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ವಿಚಾರಣೆ ಬಾಕಿ ಉಳಿಸುವುದರೊಂದಿಗೆ ‘ಅಮೂಲ್ಯ ಸಮಯ ಹಾಳು ಮಾಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯ ಪ್ರಕಾರ, ಅತ್ಯಾಚಾರವೂ ಸೇರಿದಂತೆ ವಿಭಿನ್ನ ಪ್ರಕರಣಗಳಲ್ಲಿ ಭ್ರೂಣಕ್ಕೆ ಗರಿಷ್ಠ 24 ವಾರ ತುಂಬುವುದರಳೊಗೆ ಗರ್ಭಪಾತ ಮಾಡಿಸಿಕೊಳ್ಳಬೇಕು.