ಮಂಗಳೂರು: ಕಾವೇರಿ ನದಿ (Cauvery Water) ನೀರಿಗಾಗಿ ಇಂದು ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಬೆಂಗಳೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ.
ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಈ ಬಾರಿಯೂ ಬಂದ್‌ಗೆ ಕನಿಷ್ಠ ಬೆಂಬಲವೂ ಸಿಕ್ಕಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಜನಜೀವನ ಎಂದಿನಂತೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿವೆ. ಶಾಲಾ ಕಾಲೇಜುಗಳು ಕೂಡ ನಡೆಯುತ್ತಿದ್ದು, ಜನರಿಗೆ ಬಂದ್‌ನ ಅರಿವೇ ಇಲ್ಲದಂತೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಯಥಾವತ್ತಾಗಿ ಜನಜೀವನ ಸರಾಗವಾಗಿ ನಡೆಯುತ್ತಿದ್ದು, ಮಂಗಳೂರು ನಗರದಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಪಿಕ್ ಜಾಂ ಕೂಡ ಉಂಟಾಗಿದೆ. ಆಟೋ ರಿಕ್ಷಾ,ಸಿಟಿ ಬಸ್‌ಗಳು ಎಂದಿನಂತೆ ಕಾರ್ಯಾರಂಭ ನಡೆಸಿದ್ದು, ಬಸ್ ತುಂಬಾ ಜನರು ಸಂಚರಿಸುತ್ತಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಕಾವೇರಿ ನೀರಿಗಾಗಿ ಕನಿಷ್ಠ ಪಕ್ಷ ಸಾಂಕೇತಿಕ ಪ್ರತಿಭಟನೆಯೂ ನಡೆದಿಲ್ಲ.