ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾರನ್ನ ಸ್ವತಂತ್ರವಾಗಿ ಸ್ಪರ್ಧಿಸುವಂತೆ ನಾವು ಒತ್ತಾಯ ಮಾಡಿಲ್ಲವೆಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮಂಡ್ಯದಲ್ಲಿ ಮಾತ್ನಾಡಿದ ಅವರು, ಸುಮಲತಾ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಲ್ಲ. ಅವರ ನಿಲುವುಗಳ ಬಗ್ಗೆ ನಾನು ಯಾವತ್ತು ಪ್ರಶ್ನೆ ಮಾಡಿಲ್ಲ. ಸುಮಲತಾ ಅವರು ಏನು ಬೇಕಾದ್ರು ನಿರ್ಧಾರ ತೆಗೆದುಕೊಳ್ಳಲಿ. ನಾವು ಯಾರನ್ನು ಸೋಲಿಸಲು ಇನ್ಯಾರನ್ನು ನಿಲ್ಲಿಸುತ್ತಿಲ್ಲ. ಸುಮಲತಾ ಅವರನ್ನ ಪಕ್ಷೇತರವಾಗಿ ನಿಲ್ಲಿ ಎಂದು ಹೇಳಿಲ್ಲ. ಅವರು ನಮಗೆ ಬೆಂಬಲ ಕೊಡುತ್ತೇನೆ ಅಂದ್ರೆ ಕೊಡಲಿ. ಸ್ವತಂತ್ರ ಸಂಸದೆ ಬೆಂಬಲ ಕೊಟ್ರೆ ಯಾಕೆ ಬೇಡ ಅನ್ನೋದು. ಅಂಬರೀಶ್ ಕಾಲದಿಂದಲೂ ನಾವು ಚೆನ್ನಾಗಿ ಇದ್ದೀವಿ. ಅಂಬರೀಶ್ ಹಾಗೂ ನಾನು ಒಳ್ಳೆಯ ಸ್ನೇಹಿತರು. ಸುಮಲತಾ ನಮ್ಮ ನಡುವೆ ವೈಯುಕ್ತಿಕವಾಗಿ ಒಳ್ಳೆ ಸಂಬಂಧ ಇದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ರು.
ಕುಮಾರಸ್ವಾಮಿಯವರು ಮಂಡ್ಯದಿಂದ ಲೋಕಸಭಾ ಅಭ್ಯರ್ಥಿಯಾಗುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ರಾಮನಗರ ದೇವೇಗೌಡರನ್ನು ಒಮ್ಮೆ ಹಾಗೂ ಕುಮಾರಸ್ವಾಮಿಯವರನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅಂತಹ ಜಿಲ್ಲೆಯನ್ನು ಬಿಟ್ಟು ಮಂಡ್ಯಕ್ಕೆ ಬರುತ್ತಿದ್ದಾರೆ . ಕುಮಾರಸ್ವಾಮಿಯವರು ಎಲ್ಲಾ ಭಾಗಗಳನ್ನೂ ನನ್ನ ಕರ್ಮಭೂಮಿ ಎನ್ನುತ್ತಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳನ್ನು ನನ್ನ ಕರ್ಮಭೂಮಿ ಎನ್ನುತ್ತಾರೆ. ಕೋಲಾರ, ಮೈಸೂರಿನಲ್ಲಿ ಬೇರೆ ರೀತಿ ಇರುತ್ತಾರೆ. ಹುಟ್ಟೂರು ಹಾಸನ ಎನ್ನುತ್ತಾರೆ. ಮಂಡ್ಯ ನನ್ನ ಮೊದಲ ಆದ್ಯತೆ ಎನ್ನುತ್ತಾರೆ. ತುಮಕೂರನ್ನು ಕರ್ಮಭೂಮಿ ಎಂದು ಹೇಳಿಕೊಳ್ಳುತ್ತಾರೆ. ಅವರು ರಾಷ್ಟ್ರನಾಯಕರ ಮಗ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಅವರು ಎಲ್ಲಿಂದ ಎಲ್ಲಿಗೆ ಬೇಕಾದರೂ ಬಂದು ಭಾಷಣ ಮಾಡಲಿ. ಆದರೆ ಅಭ್ಯರ್ಥಿಯಾಗುವಾಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದರು. ಕುಮಾರಸ್ವಾಮಿಯವರು ರಾಮನಗರವನ್ನು ತಿರಸ್ಕಾರ ಮಾಡಿ ಬರುವ ಬಗ್ಗೆ ಮಂಡ್ಯದ ಜನ ಯೋಚಿಸಬೇಕು. ಅದೇ ರೀತಿ ಸ್ಥಳೀಯರು ಕುಮಾರಸ್ವಾಮಿಯವರ ನಿಲುವುಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಮಂಡ್ಯದ ಅಭ್ಯರ್ಥಿ ಸ್ಟಾರ್ ಚಂದ್ರು ಏ.1 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ ಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ ಎಂದರು
ಶೀಘ್ರದಲ್ಲೇ K.C.ನಾರಾಯಣಗೌಡ್ರು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಗೊಳ್ಳುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ರು. ನಾರಾಯಣಗೌಡ ನಮ್ಮ ಸಂಪರ್ಕದಲ್ಲಿದ್ದಾರೆ. ಅತೀ ಶೀಘ್ರದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ. ಮಾಜಿ ಸಚಿವ ನಾರಾಯಣಗೌಡರ ಪಕ್ಷ ಸೇರ್ಪಡೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅವರ ಜೊತೆ K.R.ಪೇಟೆ ಭಾಗದ ಮುಖಂಡರು ಕಾಂಗ್ರೆಸ್ ಸೇರ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ರು.