ನಾಳೆ ಬಿಜೆಪಿಗೆ ಸುಮಲತಾ ಅಂಬರೀಶ್
2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ನಾಳೆ ಅಧಿಕೃತವಾಗಿ ಬಿಜೆಪಿಗೆ ಸುಮಲತಾ ಅಂಬರೀಶ್ ಸೇರ್ಪಡೆಯಾಗಲಿದ್ದಾರೆ. ನಿನ್ನೆಯೆಷ್ಟೇ ಮಂಡ್ಯ ನೆಲದಲ್ಲಿ ನಿಂತು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಅಧಿಕೃತವಾಗಿ ಘೋಷಿಸಿದ ಸುಮಲತಾ ಅಂಬರೀಶ್, ನಾಳೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದು, ಬೆಳಿಗ್ಗೆ 11:30 ಕ್ಕೆ ಅಧಿಕೃತವಾಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿರಲಿದ್ದಾರೆ.
ಇನ್ನು ನಾಳೆ ಪಕ್ಷ ಸೇರ್ಪಡೆಯಾದ ಬಳಿಕ, ಪಕ್ಷ ಕೊಡುವ ಜವಾಬ್ದಾರಿಯನ್ನು ಚಾಚುತಪ್ಪದೇ ಪರಿಪಾಲಿಸಲು ಬದ್ಧರಾಗಿರುವ ಸುಮಲತಾ ಅಂಬರೀಶ್, ಮಂಡ್ಯ ಆಖಾಡಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.