ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರೂ ಸರಾಸರಿಯಷ್ಟು ಮಳೆ ಬಿದ್ದಿಲ್ಲ. ಅದರಲ್ಲೂ ಬಯಲು ಪ್ರದೇಶದಲ್ಲಿ ಮಳೆಯ ಪ್ರಮಾಣ ತೀವ್ರ ಇಳಿಮುಖ ಆಗಿದ್ದು, ರೈತರು ಬಿತ್ತನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ರಾಜ್ಯ ಸರ್ಕಾರ ಬರಗಾಲ ಎಂದು ಘೋಷಣೆ ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅನ್ನದಾತರು ಕಾಯುತ್ತಿದ್ದಾರೆ. ಆದರೆ ಸರ್ಕಾರ ಬರ ಘೋಷಣೆಗೆ ಹಿಂದೆ ಮುಂದೆ ನೋಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು. ಈಗಾಗಲೇ ಈ ಬಗ್ಗೆ ಮಾತನಾಡಿರುವ ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಬರಪೀಡಿತ ತಾಲೂಕು ಹಾಗು ಜಿಲ್ಲೆಗಳನ್ನು ಘೋಷಣೆ ಮಾಡುವಂತೆ ಸರ್ಕಾರದ ಮೇಲೆ ರೈತಪರ ಸಂಘಟನೆಗಳು ಹಾಗು ರೈತರ ಒಕ್ಕೂಟಗಳಿಂದ ಒತ್ತಡ ಬರುತ್ತಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕಾರಣಕ್ಕೆ ಬರ ಪೀಡಿತ ಪ್ರದೇಶ ಘೋಷಣೆ ತಡ ಆಗುತ್ತಿದೆ ಎಂದಿದ್ದಾರೆ.
ಸಂಜೆ 5:30ಕ್ಕೆ ಬರಪೀಡಿತ ಜಿಲ್ಲೆಗಳ ಬಗ್ಗೆ ಚರ್ಚೆ..!

ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ, ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಸಂಗತಿ ಬಯಲಾಗಿದ್ದು, ರೈತರು ಧೈರ್ಯ ಕಳೆದುಕೊಳ್ಳಬೇಡಿ, ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ರೈತರ ಆತ್ಮಹತ್ಯೆಗಳು ಕಡಿಮೆ ಆಗಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯವಾಗಿರಿ. ರೈತರನ್ನ ಸಮಸ್ಯೆಯಿಂದ ಹೊರತರಲು ಪ್ರಯತ್ನ ಮಾಡುತ್ತೇವೆ. ಬರಪೀಡಿತ ಪ್ರದೇಶ ಅಂತ ಘೋಷಣೆಗೆ ಒತ್ತಾಯ ಇದೆ. ಮಳೆ ಬೀಳುವುದಕ್ಕೆ ಜುಲೈ ಅಂತ್ಯದವರೆಗೆ ಅವಕಾಶ ಇದೆ, ನೋಡೋಣ. ಮಂಗಳವಾರ ಸಂಜೆ 5.30ಕ್ಕೆ ಉಪ ಸಮಿತಿ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚೆ ಮಾಡಿ, ಯಾವ ಜಿಲ್ಲೆ, ಯಾವ ತಾಲೂಕನ್ನು ಬರಪೀಡಿತ ಅಂತ ಘೋಷಿಸಬೇಕು ಎಂದು ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳೇನು..?
ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಹಾಕಿದ್ದ ಬಿತ್ತನೆ ಹೊಲದಲ್ಲೇ ಒಣಗಿ ಹೋಗುತ್ತಿದೆ. ರೈತರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ 2 ಸಲ ಬಿತ್ತನೆ ಮಾಡಿದರೂ ಮಳೆ ಇಲ್ಲದೆ ವಿಫಲ ಆಗಿದೆ. ರಸಗೊಬ್ಬರ ಬೆಲೆ ಏರಿಕೆಯಿಂದ ನಷ್ಟ ಹೆಚ್ಚಾಗಿದೆ. ಕಳೆದ ವರ್ಷ ನೆರೆ ಬಂದು ಸಂಕಷ್ಟ ಎದುರಾಗಿತ್ತು. ಈ ವರ್ಷ ಬರ ಬಂದು ಸಂಕಷ್ಟ ಎದುರಾಗಿದೆ. ರೈತರ ಮೇಲೆ ಸಾಲದ ಹೊರೆ ಹೆಚ್ಚಾಗಿದ್ದು, ಕೈ ಸಾಲ ಕೂಡ ರೈತರನ್ನು ಆತಂಕಕ್ಕೆ ಈಡಾಗುವಂತೆ. ಸಾಲ ತೀರಿಸಲು ಆಗದೆ ಆತ್ಮಹತ್ಯೆ ಕಡೆಗೆ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ.
ಬರ ಪೀಡಿತ ಎಂದು ಘೋಷಣೆಗೆ ಕೇಂದ್ರ ಒಪ್ಪುತ್ತಾ..?
ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದಕ್ಕೆ ಕೇಂದ್ರ ಸರ್ಕಾರದ ಕೆಲವೊಂದು ಮಾರ್ಗಸೂಚಿಗಳಿವೆ. ಬರ ಪೀಡಿತ ಎಂದು ಘೋಷಣೆ ಮಾಡಿದರೆ ರೈತರಿಗೆ ಕೆಲವೊಂದು ಅನುಕೂಲ ಮಾಡಿಕೊಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೆಲವೊಂದು ನೀತಿ ನಿಯಮಗಳನ್ನು ಮಾಡಿದ್ದು, ಒಂದು ವೇಳೆ ರಾಜ್ಯ ಸರ್ಕಾರ ಬರ ಪೀಡಿತ ಎಂದು ಘೋಷಣೆ ಮಾಡಿದರೂ ಕೇಂದ್ರದಿಂದ ಬರ ಅಧ್ಯಯನ ತಂಡ ಆಗಮಿಸಲಿದೆ. ಕೇಂದ್ರ ಸರ್ಕಾರ ಮಾಡಿರುವ ಮಾರ್ಗಸೂಚಿಗಳಿಗೆ ಅನ್ವಯ ಆಗುತ್ತಾ..? ಎಂದು ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲಿಸಿದಾಗ ಮಳೆ ಆಗಿದೆ, ಬಿತ್ತನೆ ಆಗಿದೆ ಎಂದು ವರದಿ ಕೊಟ್ಟರೆ ಯಾವುದೇ ಲಾಭ ಆಗುವುದಿಲ್ಲ. ಈ ಬಾರಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳುಹಿಸುವ ವರದಿಯನ್ನು ಒಪ್ಪುತ್ತಾ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಕೃಷ್ಣಮಣಿ