ಆಧುನಿಕ ಭಾರತೀಯ ಮಹಿಳೆಯರು ಮದುವೆ ಮಾಡಿಕೊಳ್ಳುವುದಿಲ್ಲ, ಮಕ್ಕಳನ್ನು ಬಯಸುವುದಿಲ್ಲ ಎಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ ಸುಧಾಕರ್. ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರಿಗೆ ಬಗ್ಗೆ ಹೀಗೆ ಹೇಳುವ ಧೈರ್ಯವಿದೆಯೇ ಸುಧಾಕರ್ ಅವರೇ? ಎಂದು ಪ್ರಶ್ನಿಸಿದೆ. ಅಲ್ಲದೇ ಮಹಿಳೆಯರ ಬದುಕನ್ನ ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ಗೂ ವ್ಯತ್ಯಾಸವಿಲ್ಲ ಎಂದು ತಪರಾಕಿ ಬಾರಿಸಿದೆ.
ಸೋಂಕಿತ ಸರ್ಕಾರದ ಅನಾರೋಗ್ಯ ಪೀಡಿತ ಆಡಳಿತದಲ್ಲಿ ಜನರ ಜೀವಕ್ಕೆ ಖಾತರಿ ಇಲ್ಲ, ಆರೋಗ್ಯ ಇಲಾಖೆಯ ಆವ್ಯವಸ್ಥೆಗೂ ಚಿಕಿತ್ಸೆ ಇಲ್ಲ. ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸದೆ ಬಡವರಿಗೆ ಚಿಕಿತ್ಸೆಯನ್ನು ದುಬಾರಿಯಾಗಿಸಿದೆ. ಮಹಿಳೆಯರ ಮದುವೆ ಬಗ್ಗೆ ಚಿಂತಿಸುವ ಬದಲು ತಮ್ಮ ಇಲಾಖೆಯ ಅವ್ಯವಸ್ಥೆಯ ಬಗ್ಗೆ ಚಿಂತಿಸಿದರೆ ಒಳಿತು ಸುಧಾಕರ್ ಅವರೇ ಎಂದು ಕಾಂಗ್ರೆಸ್ ಚಾಟಿ ಬೀಸಿದೆ.
ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಆಡಿದ ಮಾತು ಮಹಿಳಾ ಸ್ವಾತಂತ್ರವನ್ನು ಅಣಕಿಸುವಂತಿದೆ. ಹೆಣ್ಣುಮಕ್ಕಳ ಬದುಕಿನ ಆಯ್ಕೆಯನ್ನು ನಿರ್ಧರಿಸಲು ನೀವು ಯಾರು? ಪುರುಷ ಯಜಮಾನಿಕೆಯನ್ನು ಮುಂದುವರೆಸುವ ಹವಣಿಕೆ ನಿಮಗೇಕೆ? ಮನುವಾದವನ್ನು ನಂಬಿದ ಬಿಜೆಪಿಯ ಮಹಿಳಾ ವಿರೋಧಿ ಕುತಂತ್ರಗಳು ಅವರ ಮಾತುಗಳಲ್ಲಿಯೇ ವ್ಯಕ್ತವಾಗುತ್ತಿದೆ ಎಂದು ಛೀಮಾರಿ ಹಾಕಿದೆ.
ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಮಹಿಳಾ ಸ್ವಾತಂತ್ರ್ಯ ಬಗ್ಗೆ ಮಾತಾಡಬೇಕು. ಸ್ತ್ರೀ ಸಬಲೀಕರಣ, ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡಬೇಕು. ಇದರ ಬದಲಿಗೆ ಸ್ತ್ರೀಯರ ಬಗ್ಗೆ ಪ್ರತಿಗಾಮಿಯಾಗಿ ಮಾತನಾಡಿ ದೋಷಾರೋಪಣೆ ಮಾಡುವ ಸಂಸ್ಕೃತಿಯನ್ನು ಮಾನ್ಯ ಸುಧಾಕರ್ ಅವರು ಬಿಜೆಪಿಯನ್ನು ಸೇರಿದ ಮೇಲೆ ಕಲಿತಿರುವುದೇ? ಎಂದು ಕಾಂಗ್ರೆಸ್ ಯುವ ನಾಯಕ ರಕ್ಷಾ ರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸುಧಾಕರ್ ಅವರು ಬಿಜೆಪಿಗೆ ಸೇರಿದ ಮೇಲೆ ಸ್ತ್ರೀಯರನ್ನು ಅಗೌರವದಿಂದ ಕಾಣುವ ಕಳಪೆಯಾಗಿ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇದು. ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯದ ಬಗ್ಗೆ ತಾವು ಧ್ವನಿ ಎತ್ತಿದ್ದೀರಾ? ಸ್ತ್ರೀ ಸಬಲೀಕರಣ, ಸ್ತ್ರೀ ಸುರಕ್ಷತೆಯ ಬಗ್ಗೆ ಮಾತನಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದ ಸುಧಾಕರ್, ಆಧುನಿಕ ಭಾರತೀಯ ಮಹಿಳೆಯರು ಈಗ ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಇಷ್ಟ ಪಡುತ್ತಾರೆ. ಒಂದು ವೇಳೆ ಮದುವೆಯಾದರೂ ಕೂಡಾ ಮಗುವಿಗೆ ಜನ್ಮ ನೀಡಲು ಇಚ್ಛಿಸಲ್ಲ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನಾನು ಈ ಮಾತನ್ನು ಹೇಳಲು ಬೇಸರ ಪಡುತ್ತೇನೆ. ನನ್ನನ್ನು ಕ್ಷಮಿಸಿ. ಈಗ ಹಲವಾರು ಆಧುನಿಕ ಭಾರತೀಯ ಮಹಿಳೆಯರು ಒಬ್ಬಂಟಿಯಾಗಿಯೇ ಇರಲು ಇಷ್ಟ ಪಡುತ್ತಾರೆ. ಅವರಿಗೆ ಬಾಡಿಗೆ ತಾಯಿ ಬೇಕು. ಇಂದಿನ ಆಧುನಿಕ ಮಹಿಳೆಯರು ಹೆಚ್ಚಾಗಿ ಈ ರೀತಿಯ ಮನೋಭಾವವನ್ನು ಹೊಂದಿದ್ದಾರೆ. ಇದು ಪಾಶ್ಚತ್ಯ ಸಂಸ್ಕೃತಿಯ ಪಾಲನೆ. ಈ ಬದಲಾವಣೆ ಒಳ್ಳೆಯದಲ್ಲ. ಹಾಗೆಯೇ ಈಗಿನ ಜನರು ತಮ್ಮ ಪೋಷಕರು ತಮ್ಮ ಜೊತೆ ಜೀವಿಸಬೇಕು ಎಂಬುವುದನ್ನು ಕೂಡಾ ಒಪ್ಪುವುದಿಲ್ಲ ಎಂದು ತಿಳಿಸಿದ್ದರು.
ಈ ಬದಲಾವಣೆ ಉತ್ತಮವಲ್ಲ. ಆದರೂ ನಾವು ಇಂದು ಪಾಶ್ಚತ್ಯ ಸಂಸ್ಕೃತಿಯೆಡೆ ವಾಲುತ್ತಿದ್ದೇವೆ. ನಮ್ಮ ಪೋಷಕರು ನಮ್ಮ ಜೊತೆ ಜೀವಿಸುವುದು, ನಮ್ಮ ಈಗಿನ ಯುವ ಜನರಿಗೆ ಬೇಡ. ಹಾಗಿರುವಾಗ ನಮ್ಮ ತಾತ, ಅಜ್ಜಿ ನಮ್ಮ ಜೊತೆ ಇರುವ ವಿಚಾರವನ್ನೇ ಮರೆತುಬಿಡಿ ಎಂದಿದ್ದರು. ಈಗ ಸುಧಾಕರ್ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಆಧುನಿಕ ಭಾರತೀಯ ಮಹಿಳೆಯರ ಬಗ್ಗೆ ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಎಲ್ಲ ಮಹಿಳೆಯರು ಒಂದೇ ರೀತಿ ಇರೋದಿಲ್ಲ. ಇದು ಪಾಶ್ಚಿಮಾತ್ಯ ಸಂಸ್ಕೃತಿ ಬೀರುತ್ತಿರುವ ಪ್ರಭಾವದಿಂದ ಹೀಗಾಗುತ್ತಿದೆ. ಈಗಲೂ ಯುಎಸ್, ಯುಕೆಗಿಂತಲೂ ಭಾರತದಲ್ಲಿ ಕೌಟುಂಬಿಕ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ವಿದ್ಯಾವಂತ ಮತ್ತು ದುಡಿಯುವ ಮಹಿಳೆಯರ “ಮನಸ್ಥಿತಿ” “ತುಂಬಾ ವಿಸ್ತಾರವಾಗಿದೆ” ಎಂದು ರವಿ ಮತ್ತಷ್ಟು ವಿವರಿಸಿ ಡಾ ಸುಧಾಕರ್ ನೀಡಿದ ಹೇಳಿಕೆಗಳಿಗೆ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.