ನವದೆಹಲಿ : ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಕೇಂದ್ರ ಸರ್ಕಾರವು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ.
ಅಕ್ಟೋಬರ್ 1, 2026ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ರಹಿತ ಸಿಲಿಂಡರ್ ದರ ಅನ್ವಯವಾಗಲಿದ್ದು, ಮಾಸಿಕ ಅಡುಗೆ ಅನಿಲದ ವೆಚ್ಚ ಸುಮಾರು 4,500 ರೂಪಾಯಿಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪುವಂತೆ ಮಾಡಲು ಹಾಗೂ ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿರುವ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ; ಅವರಿಗೆ ಎಂದಿನಂತೆ ಸಿಲಿಂಡರ್ ಬುಕಿಂಗ್ ಮತ್ತು ಸಬ್ಸಿಡಿ ಮುಂದುವರಿಯಲಿದೆ. ಆದರೆ ನಿಗದಿತ ದಿನಾಂಕದೊಳಗೆ ಪರಿಶೀಲನೆ ಮುಗಿಸದ ಗ್ರಾಹಕರು 14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಪಡೆಯುವ ಅರ್ಹತೆಯನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳಲಿದ್ದಾರೆ. ಅಂತಹ ಗ್ರಾಹಕರಿಗೆ ತೈಲ ಮಾರಾಟ ಕಂಪನಿಗಳು ಲಭ್ಯತೆಗೆ ಅನುಗುಣವಾಗಿ ಮಾರುಕಟ್ಟೆ ದರದಲ್ಲಿ 5 ಕೆಜಿ ಅಥವಾ 10 ಕೆಜಿಯ ಸಣ್ಣ ಸಿಲಿಂಡರ್‌ಗಳನ್ನು ಮಾತ್ರ ನೀಡುವ ಸಾಧ್ಯತೆಯಿದೆ.
ಇದರಿಂದಾಗಿ ಒಂದೇ 14.2 ಕೆಜಿ ಸಿಲಿಂಡರ್‌ನಷ್ಟೇ ಅನಿಲ ಪಡೆಯಲು ಹೆಚ್ಚಿನ ಸಂಖ್ಯೆಯ ಸಣ್ಣ ಸಿಲಿಂಡರ್‌ಗಳನ್ನು ದುಬಾರಿ ಬೆಲೆಗೆ ಖರೀದಿಸಬೇಕಾಗಿ ಬಂದು, ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಹೊರೆ ಬೀಳಲಿದೆ. ಯಾವುದೇ ನೈಜ ಗ್ರಾಹಕರ ಸಂಪರ್ಕವನ್ನು ರದ್ದುಪಡಿಸುವುದು ಸರ್ಕಾರದ ಉದ್ದೇಶವಲ್ಲ, ಬದಲಿಗೆ ನಕಲಿ ಸಂಪರ್ಕಗಳನ್ನು ಪತ್ತೆಹಚ್ಚುವುದೇ ಇದರ ಮುಖ್ಯ ಉದ್ದೇಶ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.

ಗ್ರಾಹಕರು ತಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ, ಸಿಲಿಂಡರ್ ವಿತರಣೆ ಪಡೆಯುವ ಸಂದರ್ಭದಲ್ಲಿ ಡೆಲಿವರಿ ಸಿಬ್ಬಂದಿಯ ಮೂಲಕ ಅಥವಾ ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹೆಚ್‌ಪಿ ಗ್ಯಾಸ್‌ನ ಅಧಿಕೃತ ಮೊಬೈಲ್ ಆ್ಯಪ್‌ಗಳಲ್ಲಿ ‘ಆಧಾರ್ ಫೇಸ್ ಅಥೆಂಟಿಕೇಶನ್’ ಬಳಸಿ ಸುಲಭವಾಗಿ ಈ ಪ್ರಕ್ರಿಯೆಯನ್ನು ಮುಗಿಸಬಹುದು. ದೇಶದ ಸುಮಾರು 27.43 ಕೋಟಿ ಸಕ್ರಿಯ ಗ್ರಾಹಕರು, ಅಂದರೆ ಒಟ್ಟು ಬಳಕೆದಾರರಲ್ಲಿ ಶೇಕಡಾ 89.9 ರಷ್ಟು ಮಂದಿ ಈಗಾಗಲೇ ಪರಿಶೀಲನೆ ಪೂರ್ಣಗೊಳಿಸಿದ್ದಾರೆ. ಉಳಿದ ಗ್ರಾಹಕರು ಯಾವುದೇ ವ್ಯತ್ಯಯವಿಲ್ಲದೆ ಸಬ್ಸಿಡಿ ಪಡೆಯಲು ಅಕ್ಟೋಬರ್ 1ರ ಒಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
24 ಗಂಟೆಗಳಲ್ಲಿ ರಾಜೀನಾಮೆ ನೀಡದಿದ್ದರೆ ಅ. 2 ರಿಂದ ಪ್ರತಿಭಟನೆ: CEC ಜ್ಞಾನೇಶ್ ಕುಮಾರ್ ಗೆ CJP ಖಡಕ್ ಎಚ್ಚರಿಕೆ






