ಕೋಲಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ದಿನವೇ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಕೆಆರ್ ಎಸ್ ಪಕ್ಷದಿಂದ ಇಂದಿರಾ ರೆಡ್ಡಿ ಹಾಗೂ ಪಕ್ಷೇತರ ಅಭ್ಯರ್ಥಿ ವೆಂಕಟಾಚಲಪತಿ. ಜಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕೋಲಾರದಲ್ಲಿ ಬಿಜೆಪಿ & ಜೆಡಿಎಸ್ ನಡುವೆ ಫೈಟ್ ಇರುತ್ತೆ:
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು ಮೊದಲನೆಯ ದಿನ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂಆರ್ ಶ್ರೀನಾಥ್, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ. ಕೋಲಾರದಲ್ಲಿ ಬಿಜೆಪಿ ಹಾಗು ಜೆಡಿಎಸ್ ಪಕ್ಷದ ನಡುವೆ ನೇರ ಹಣಾಹಣಿ ನಡೆಯಲಿದೆ. ಯಾರೇ ಅಭ್ಯರ್ಥಿ ಆದರೂ ಜೆಡಿಎಸ್ ಗೆಲುವು ಸಾಧಿಸಲಿದೆ. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೂ ಜೆಡಿಎಸ್ ಪಕ್ಷ ಗೆಲುವು ಸಾಧಿಸುತ್ತದೆ. ಮತ್ತೊಮ್ಮೆ ನಾಮಪತ್ರ ಸಲ್ಲಿಸುವಾಗ ಕುಮರಸ್ವಾಮಿ ಅವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತದೆ. ನಮ್ಮ ಜೆಡಿಎಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಒಂದು ವೇಳೆ ಭಿನ್ನಮತ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೂಡಿ ವಿಜಯ್ ಕುಮಾರ್:
ಇನ್ನು ಮಾಲೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಮಾಲೂರಿನಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸೆಡ್ಡು ಹೊಡೆದ ಹೂಡಿ ವಿಜಯ್ ಕುಮಾರ್ ಅವರು ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಕೆಆರ್ ಎಸ್ ಪಕ್ಷದ ಅಭ್ಯರ್ಥಿಯಾಗಿ ಎ.ವಿ.ಮಹೇಶ್ ಹಾಗೂ ಜೆಡಿಎಸ್ ಅಭ್ಯರ್ಥಿ ಜೆ.ಇ.ರಾಮೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೂಪಕಲಾ ಶಶಿಧರ್ ರವರು ನಾಮಪತ್ರ ಸಲ್ಲಿಸಿದ್ದಾರೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆಆರ್ ಎಸ್ ಪಕ್ಷದ ಅಭ್ಯರ್ಥಿಯಾಗಿ ರಾಜಾ ಎಂ ಮತ್ತು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಮೊದಲನೇ ದಿನ ಶ್ರೀನಿವಾಸಪುರ ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಇನ್ನು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.











