ಉಳ್ಳಾಲ: ಅಂಕ ಸರಿ ನೀಡಿಲ್ಲವೆಂದು ಶಿಕ್ಷಕಿಯ ವಾಟರ್ ಬಾಟಲ್ಗೆ ಮಾತ್ರೆ ಹಾಕಿದ 6 ನೇ ಕ್ಲಾಸ್ ವಿದ್ಯಾರ್ಥಿನಿಯರು – ಮಕ್ಕಳ ಆಘಾತಕಾರಿ ನಡೆಯಿಂದ ಶಿಕ್ಷಕಿರಿಬ್ಬರು ಅಸ್ವಸ್ಥಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ವೇಳೆ ಸರಿಯಾಗಿ ಅಂಕ ನೀಡಿಲ್ಲವೆಂದು ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ವಾಟರ್ ಬಾಟಲ್ಗೆ ಎಕ್ಸ್ಪೈರಿ ಡೇಟ್ ಮುಗಿದ ಮಾತ್ರೆ ಹಾಕಿದ ಘಟನೆ ಉಳ್ಳಾಲ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಆ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.
ಆರನೇ ತರಗತಿ ವಿದ್ಯಾರ್ಥಿನಿಯರು ಈ ಕೃತ್ಯ ಎಸಗಿದ್ದು 10- 11 ವರ್ಷ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಇಷ್ಟೊಂದು ದ್ವೇಷ ಉತ್ಪತ್ತಿಯಾಗಿರುವುದು ಹೇಗೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ . ವಿದ್ಯಾರ್ಥಿನಿಯರ ಈ ಬೆಚ್ಚಿ ಬೀಳಿಸುವ ಕೃತ್ಯಕ್ಕೆ ಶಾಲಾ ಆಡಳಿತ ಮಂಡಳಿ, ಹೆತ್ತವರು, ಶಿಕ್ಷಕ ವರ್ಗ ಆಘಾತಕ್ಕೆ ಒಳಗಾಗಿದೆ.ಶಾಲಾ ಯುನಿಟ್ ಟೆಸ್ಟ್ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೆ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಎಂಬ ದ್ವೇಷವೂ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು.
ಇದರ ಸೇಡು ತೀರಿಸುವ ಸಲುವಾಗಿ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ಆರನೇ ತರಗತಿ ವಿದ್ಯಾರ್ಥಿನಿ, ಸ್ಟಾಫ್ ರೂಮ್ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಎಲ್ಲಿಂದಲೋ ತಂದಿದ್ದ ಅವಧಿ ಮೀರಿದ ಮಾತ್ರೆಗಳನ್ನು ಗಣಿತ ಶಿಕ್ಷಕಿಗೇ ಸೇರಿದ ವಾಟರ್ ಬಾಟಲಿಗೆ ಹಾಕಿದ್ದಾರೆ. ಇಂತಹ ದೃಶ್ಯವನ್ನು ಬೇರೆ ಎಲ್ಲಿಯಾದರೂ ಮಾಡಿರುವುದನ್ನು ಕಂಡು ಕೃತ್ಯ ಎಸಗಿದರೋ? ಅಥವಾ ಯಾರಾದರೂ ಹೇಳಿಕೊಟ್ಟರೇ ಎಂಬ ಅನುಮಾನ ಪೋಷಕರಿಗೆ ಮೂಡಿದೆ. ಘಟನೆ ಸಂಬಂಧ ಶಾಲೆಯಲ್ಲಿ ತುರ್ತು ಎಸ್ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿಸಿ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಅಷ್ಟಕ್ಕೂ ಟಿ.ಸಿ. ಕೊಟ್ಟು ಕಳುಹಿಸಿದರೆ ಅವರಲ್ಲಿ ಮಾರ್ಪಾಡು ಸಾಧ್ಯವೇ, ಅದಕ್ಕಿಂತಲೂ ಕೌನ್ಸಿಲಿಂಗ್ ಮಾಡಿಸಿ ಸರಿಪಡಿಸಲು ಸಾಧ್ಯವಾಗದೇ ಎಂಬ ಪ್ರಶ್ನೆಯೂ ಪೋಷಕರಿಂದ ವ್ಯಕ್ತವಾಗಿದೆ.