ಇತ್ತೀಚೆಗೆ ರಾಜ್ಯ ಸರ್ಕಾರ ಮಾಡಿದ ನೂತನ ನೃಪತುಂಗ ಯೂನಿವರ್ಸಿಟಿ ಮುಂಭಾಗ ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜನ್ನು ಇತ್ತೀಚೆಗೆ ನೃಪತುಂಗ ಯೂನಿವರ್ಸಿಟಿ ಎಂದು ಮಾಡಲಾಯ್ತು. ಈ ಕಾಲೇಜಿನ ಅಂದಾಜು ಜಾಗ ಕೇವಲ 3.7 ಎಕರೆ ಇದೆ, ಹೀಗಿದ್ದರೂ ಸರ್ಕಾರಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಿದ್ದಾರೆ.
ಒಂದು ಯೂನಿವರ್ಸಿಟಿ ಮಾಡಲು ಕನಿಷ್ಠ 10 ಎಕರೆ ಬೇಕು ಎಂದು ರಾಜ್ಯ ಸರ್ಕಾರದ ಆದೇಶ ಇದೆ. ನೃಪತುಂಗ ಯೂನಿವರ್ಸಿಟಿ ಈಗ ಕೇವಲ 3.7 ಎಕರೆ ಜಾಗ ಹೊಂದಿದ್ದು, ಪಕ್ಕದ ಸರ್ಕಾರಿ ಕಲಾ ಕಾಲೇಜು ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದೆ.
ನೃಪತುಂಗ ಯೂನಿವರ್ಸಿಟಿ ಸರ್ಕಾರಿ ಕಲಾ ಕಾಲೇಜು ಜಾಗ 7 ಎಕರೆ ಒತ್ತುವರಿಗೆ ಮಂದಾಗಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಮತ್ತು ನೃಪತುಂಗ ಯೂನಿವರ್ಸಿಟಿ ವಿರುದ್ಧ ಪ್ರತಿಭಟಿಸಿದರು. ನಮ್ಮ ಕಾಲೇಜಿನ ಜಾಗ ಹೇಗೆ ಒತ್ತುವರಿ ಮಾಡಿಕೊಳ್ಳುತ್ತೀರಿ ಎಂದು ಅಸಮಾಧಾನ ಹೊರಹಾಕಿದರು.
ಕೊರೋನಾ ಸಂದರ್ಭದಲ್ಲಿ ಕಾಲೇಜು ತರಗತಿಗಳು ನಡೆಯುತ್ತಿರಲಿಲ್ಲ. ಆಗ ರಾಜ್ಯ ಸರ್ಕಾರ ಸರ್ಕಾರಿ ವಿಜ್ಞಾನ ಕಾಲೇಜನ್ನು ನೃಪತುಂಗ ಯೂನಿವರ್ಸಿಟಿಯನ್ನಾಗಿ ಮಾಡಿದೆ. ಈ ವೇಳೆ ನೃಪತುಂಗ ಯೂನಿವರ್ಸಿಟಿ ಉಪಕುಲಪತಿ ಶ್ರೀನಿವಾಸ್ ಬಳ್ಳಿ ನಕಲಿ ದಾಖಲೆ ಸೃಷ್ಟಿಸಿ ನಮ್ಮದು 11 ಎಕರೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನೃಪತುಂಗ ಯೂನಿವರ್ಸಿಟಿ ವಿಸಿ ಶ್ರೀನಿವಾಸ ಬಳ್ಳಿ ಸೃಷ್ಟಿಸಿದ ನಕಲಿ ದಾಖಲೆಗಳ ಆಧಾರದ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಅಧೀನ ಕಾರ್ಯದರ್ಶಿ ಮಹೇಶ್ ಒಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶ ಪ್ರತಿಯಲ್ಲಿ ಸರ್ಕಾರಿ ಕಲಾ ಕಾಲೇಜು ಜಾಗವನ್ನು ಯೂನಿವರ್ಸಿಟಿಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಸರ್ಕಾರ ಕಲಾ ಕಾಲೇಜು ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಶಿಫ್ಟ್ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆಯೇ ಸರ್ಕಾರ ಕಲಾ ಕಾಲೇಜು ಜಾಗದ ಮೇಲೆ ಪ್ರಭಾವಿ ರಾಜಕಾರಣಿಗಳ ಕಣ್ಣು ಬಿದ್ದಿತ್ತು. ಈಗಾಗಲೇ ಸರ್ಕಾರವು ಕಲಾ ಕಾಲೇಜಿನ ಒಂದಷ್ಟು ಜಾಗವನ್ನು ಸಿವಿಲ್ ಕೋರ್ಟ್, ಬೆಂಗಳೂರು ಮೆಟ್ರೋ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟಿದ್ದಾರೆ.
ಈಗ ಸರ್ಕಾರ ಕಲಾ ಕಾಲೇಜಿನಲ್ಲಿ ಇರುವುದು 7 ಎಕರೆ ಜಾಗ. ಈ ಜಾಗವನ್ನು ಅಧಿಕಾರದ ದುರಾಸೆಗಾಗಿ ನೃಪತುಂಗ ಯೂನಿವರ್ಸಿಟಿ ಉಪ ಕುಲಪತಿ ಶ್ರೀನಿವಾಸ್ ಬಳ್ಳಿ ಮತ್ತು ಹಲವು ಅಧಿಕಾರಿಗಳು ಹೊಡೆಯಲು ಮುಂದಾಗಿದ್ದಾರೆ ಎನ್ನುವುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ.
ಇನ್ನು, ಸರ್ಕಾರ ಕಲಾ ಕಾಲೇಜಿನಲ್ಲಿ 2 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ವಿದ್ಯಾರ್ಥಿಗಳು ಈ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಡೀ ಕರ್ನಾಟಕದಲ್ಲೇ ಕಲಾ ವಿಭಾಗಕ್ಕಾಗಿ ಇರುವ ಏಕೈಕ ಕಾಲೇಜು ಗವರ್ನಮೆಂಟ್ ಆರ್ಟ್ಸ್ ಕಾಲೇಜು.