1950 ರ ದಶಕದಲ್ಲಿ ಸಾವಿರಾರು ಕಿಲೋಮೀಟರ್ಗಳ ದೂರ ಪ್ರಯಾಣಿಸಿ ನಿರಾಶ್ರಿತರಾಗಿ ಭಾರತಕ್ಕೆ ಬಂದು ಆಶ್ರಯ ಪಡೆದ ಟಿಬೇಟಿಯನ್ನರು ಕಷ್ಟ ಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ ನಮ್ಮ ಬರಡು ಭೂಮಿಯನ್ನು ಬಂಗಾರವನ್ನಾಗಿಸಿ ಉತ್ತಮ ಬೆಳೆ ತೆಗೆದು ದೇಶದ ಆರ್ಥಿಕತೆಗೂ ಅಳಿಲು ಸೇವೆ ಸಲ್ಲಿಸುತಿದ್ದಾರೆ. ನಿರಾಶ್ರಿತರಾಗಿ ಬಂದಿರುವ ಇವರು ಇಂದು ಸ್ಥಳೀಯರಿಗೂ ಉದ್ಯೋಗ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಅಷ್ಟೇ ಅಲ್ಲ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ.
ಕಳೆದ ವರ್ಷದ ಕೋವಿಡ್ಲಾಕ್ಡೌನ್ಸಮಯದಲ್ಲಿ ಸ್ಥಳೀಯ ಬಡವರಿಗೆ ಆಹಾರದ ಕಿಟ್ಗಳನ್ನು ವಿತರಿಸಿದ್ದಾರೆ. ಇದೀಗ ನಾಯಿಗಳಿಗೂ ಒಂದು ಆರೈಕೆ ಕೇಂದ್ರವನ್ನು ತೆರೆದು ಶ್ಲಾಘನೀಯ ಕಾರ್ಯದಲ್ಲಿ ತೊಡಗಿ ಸ್ಥಳೀಯರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಬೈಲಕೊಪ್ಪದ ಟಿಬೇಟನ್ ನಿರಾಶ್ರಿತರ ಶಿಬಿರದ ಮೂರನೇ ಕ್ಯಾಂಪಿನಲ್ಲಿ ಶ್ವಾನಗಳಿಗಾಗಿಯೇ ನಾಯಿಗಳ ಆರೈಕೆಯ ಕೇಂದ್ರವೊಂದನ್ನು ತೆರೆಯಲಾಗಿದೆ.
ಇಲ್ಲಿ ನಲವತ್ತಕ್ಕೂ ಅಧಿಕ ಶ್ವಾನಗಳು ಒಂದಲ್ಲ ಒಂದು ಕಾರಣದಿಂದ ಆರೈಕೆಗೊಳಗಾಗಿವೆ. ಅಷ್ಟಕ್ಕೂ ಈ ಬೀದಿ ನಾಯಿಗಳ ಸಂರಕ್ಷಣಾಲಯವನ್ನು ತೆರೆದಿರುವವರು ಬೈಲುಕೊಪ್ಪದ ಮೂರನೇ ಶಿಬಿರದ ಸಮಾಜ ಸೇವಕಿ ತ್ಸೆರಿಂಗ್ ಡೋಲ್ಮಾ ಎಂಬ ಮಹಿಳೆ. ಈ ಕೇಂದ್ರದಲ್ಲಿ ಡೋಲ್ಮಾ ಅವರ ಸಹೋದರ ಕೆಲ್ಸಂಜ್ ವ್ಯವಸ್ಥಾಪಕರಾಗಿದ್ದಾರೆ. ಹಾಗೆಯೇ ಬಿಕಾಂ ಪದವಿಯನ್ನು ಪೂರ್ಣಗೊಳಿಸಿ ಪಶು ಚಿಕಿತ್ಸಾಲಯದಲ್ಲಿ ತರಬೇತಿ ಪಡೆದ ಟೆನ್ಜಿನ್ ಎಂಬುವವರು ಶ್ವಾನಗಳ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಚಿಕಿತ್ಸಾಲಯದಲ್ಲಿರುವ 40 ಕ್ಕೂ ಹೆಚ್ಚಿನ ಶ್ವಾನಗಳ ಪೈಕಿ ಹಲವು ಶ್ವಾನಗಳು ಬೇರೆ ಬೇರೆ ಕಾರಣಗಳಿಂದ ಗಾಯಗೊಂಡು ಬಂದು ಇಲ್ಲಿ ಚಿಕಿತ್ಸೆ ಪಡೆದಿವೆ. ಇನ್ನು ಕೆಲವು ಚಿಕಿತ್ಸೆ ಪಡೆಯುತ್ತಿವೆ. ಆದರೆ ಅಷ್ಟೂ ವಿಭಿನ್ನ ಬಗೆಯ ಶ್ವಾನಗಳ ಪೈಕಿ ಟಾಮಿ ಎಂಬ ಹೆಸರಿನ ಶ್ವಾನವೊಂದು ಇಲ್ಲಿಗೆ ಧಾವಿಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಅಂದರೆ ತಾನು ಹಿಂದೆ ಅನುಭವಿಸಿರುವ ಯಾತನೆಯನ್ನು ನೋಡುಗರಿಗೆ ಕಟ್ಟಿ ಕೊಡುವರೀತಿ ಇದೆಯಲ್ಲಾ…ಅದು ಎಂತಹ ಗಟ್ಟಿ ಹೃದಯಿಗರ ಕಣ್ಣಾಲಿಗಳನ್ನೂ ತೇವಗೊಳಿಸುತ್ತದೆ.
ಹುಣಸೂರು ತಾಲೂಕಿನ ಗುರುಪುರದ ಟಿಬೇಟನ್ ಶಿಬಿರದ ದೇಗುಲದ ಬಳಿ ಹಲವು ವರುಷಗಳಿಂದ ಇದ್ದ ಈ ಟಾಮಿ ಮೇಲೆ ಯಾವುದೋ ವಾಹನ ಹತ್ತಿದ ಪರಿಣಾಮ ಹಿಂಬದಿಯ ಎರಡು ಕಾಲುಗಳು ಹಾಗೂ ಸೊಂಟದ ಭಾಗ ಸಂಪೂರ್ಣ ಊನಗೊಂಡಿದ್ದವು. ನಂತರ ಅಲ್ಲಿನ ವ್ಯಕ್ತಿಯೊಬ್ಬರು ಈ ಚಿಕಿತ್ಸಾಲಯವನ್ನು ಸಂಪರ್ಕಿಸಿದಾಗ ಇಲ್ಲಿನ ವ್ಯವಸ್ಥಾಪಕ ಕೆಲ್ಸಂಜ್ ಎಂಬಾತ ಗುರುಪುರಕ್ಕೆ ತನ್ನ ವಾಹನದಲ್ಲಿ ತೆರಳಿ ಸಾವು ಬದುಕಿನೊಂದಿಗೆ ನರಳಾಡುತ್ತಿದ್ದ ಟಾಮಿಯನ್ನು ತನ್ನ ಚಿಕಿತ್ಸಾಲಯಕ್ಕೆ ತಂದು ಶುಶ್ರೂಷಕಿ ಟೆನ್ಜಿನ್ ವಿಶೇಷ ಆಸಕ್ತಿ ವಹಿಸಿ ಆರೈಕೆ ಮಾಡಿದರು. ಆದರೂ ಅದರ ಹಿಂಬದಿಯ ಕಾಲುಗಳು ನಿಷ್ಪ್ರಯೋಜಕ ಎಂದು ತಿಳಿದೊಡನೆ ಆ ಟಾಮಿಯ ಮೇಲಿದ್ದ ಮಮತೆಯೋ, ಮಮಕಾರವೋ ಗೊತ್ತಿಲ್ಲ. ಕೆಲ್ಸಂಜ್ ಹಾಗೂ ಟೆನ್ಜಿನ್ ಒಂದು ಹೊಸ ಆವಿಷ್ಕಾರಕ್ಕೆ ಮುಂದಾದರು. ಟಾಮಿಯ ಸುಲಲಿತ ನಡಿಗೆಗೆ ಹಾಗೂ ಆರೈಕೆಗೆ ಎಂದೇ ಗುಜರಾತಿನಿಂದ ರೂ 20 ಸಾವಿರ ವ್ಯಯಿಸಿ ಗಾಲಿಯ ಯಂತ್ರವನ್ನು ತರಿಸಿ ಈ ಟಾಮಿಗೆ ಅಳವಡಿಸಿದರು.
ಆರಂಭದ ಒಂದೆರಡು ದಿನಗಳು ಈ ಗಾಲಿಯ ಯಂತ್ರಕ್ಕೆ ಬಸವಳಿದ ಟಾಮಿಗೆ ಈ ಶುಶ್ರೂಷಕಿ ಹೇಗೋ ಅಭ್ಯಾಸ ಮಾಡಿಸಿದರು. ಈಗ ಟಾಮಿ ತಾನೊಬ್ಬನೇ ಶಿಬಿರದಿಂದ ಹೊರ ಹೋಗಿ ಸುತ್ತಾಡಿ ಬರುತ್ತಾನೆ. ಹಾಗೆಯೇ ಬೇರೆ ಬೇರೆ ಕಡೆಗಳಿಂದ ಅಪಘಾತಕ್ಕೆ ತುತ್ತಾದ, ಗಾಯಗೊಂಡ, ಪಾರ್ಶ್ವವಾಯು ಪೀಡಿತ ಬೇರೆ ಬೇರೆ ಕಾರಣಗಳಿಂದಾಗಿ ದಾಖಲಾಗಿರುವ ಶ್ವಾನಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿದೆ.
ಸುತ್ತಲೂ ಕಬ್ಬಿಣದ ಮೆಶ್ಗಳಿಂದ ನಿರ್ಮಾಣ ಮಾಡಿರುವ ಘಟಕದಲ್ಲಿ ಆಶ್ರಯ ಕಲ್ಪಿಸಿರುವ ಬೀದಿ ನಾಯಿಗಳಿಗೆ ಈ ಚಿಕಿತ್ಸಾಲಯದಲ್ಲಿ ಬೆಳಿಗ್ಗೆ ಹಾಗೂ ಸಂಜೆ ತರಹೇವಾರಿ ಊಟೋಪಚಾರ ನೀಡಲಾಗುತ್ತಿದೆ. ಅಂದರೆ ಸರ್ಕಾರಿ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ರೀತಿಯಲ್ಲೇ ಈ ಶ್ವಾನಗಳಿಗೆ ಬೆಳಿಗ್ಗೆ 9 ಗಂಟೆಗೆ ಪೆಡಿಗ್ರಿ, ಸಂಜೆ 5 ಗಂಟೆಗೆ ಅಕ್ಕಿಯಿಂದ ಬೇಯಿಸಿದ ಯಾವುದೇ ಖಾದ್ಯವನ್ನು ನೀಡಲಾಗುತ್ತದೆ. ಹಾಗೆಯೇ ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ಬಿಸ್ಕತ್ ಅಥವಾ ಬ್ರೆಡ್ ಲಘು ಉಪಹಾರವನ್ನು ನೀಡಲಾಗುತ್ತದೆ. ಕುಡಿಯಲು ಶುದ್ಧ ನೀರು ಹಾಗೂ ಹಾಲನ್ನು ನೀಡಲಾಗುತ್ತದೆ.
ಈ ಘಟಕದಲ್ಲಿ ಹತ್ತು ದಿನಗಳಿಗೊಮ್ಮೆ ಶ್ವಾನಗಳಿಗೆಂದೇ ಸಿದ್ದ ಪಡಿಸಿರುವ ಸೋಪ್ ಹಾಗೂ ಕ್ರೀಂ ಬಳಸಿ ಸ್ನಾನ ಮಾಡಿಸಲಾಗುತ್ತದೆ. ಹಾಗೆಯೇ ಚರ್ಮ ರೋಗ ವ್ಯಾಧಿ ಇರುವ ಶ್ವಾನಗಳಿಗೆ ಪ್ರತೀ ನಾಲ್ಕು ದಿನಗಳಿಗೊಮ್ಮೆ ಸ್ನಾನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಈ ಘಟಕದಲ್ಲಿನ ಶ್ವಾನಗಳು ಮಲಗಿ ನಿದ್ರಿಸಲು ಸುಸಜ್ಜಿತವಾದ ಹಾಸಿಗೆಗಳುಳ್ಳ ಪ್ರತ್ಯೇಕ ಕಪಾಟುಗಳನ್ನು ನಿರ್ಮಿಸಲಾಗಿದೆ. ಇವುಗಳ ಆರೈಕೆಗೆ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಹಾಗೆಯೇ ಈ ಘಟಕಕ್ಕೆ ಬಂದು ಶ್ವಾನಗಳನ್ನು ನೋಡಿ ಖುಷಿ ಪಟ್ಟು ಮನೆಗೆ ಕೊಂಡು ಹೋಗಿ ಸಾಕುವ ಆಸಕ್ತಿ ತೋರುವ ಮಂದಿಗೆ ಅವರು ಇಚ್ಛಿಸುವ ಶ್ವಾನವನ್ನು ನೀಡಲಾಗುತ್ತದೆ. ಆದರೆ ಘಟಕದಿಂದ ಶ್ವಾನವನ್ನು ಕೊಂಡು ಹೋದವರು ಆಗಿಂದಾಗ್ಯೆ ಅದರ ಆರೋಗ್ಯ ಹಾಗೂ ನಿರ್ವಹಣೆಯ ಬಗ್ಗೆ ಇಲ್ಲಿನ ಶುಶ್ರೂಷಕಿಯ ಗಮನಕ್ಕೆ ತರಲೇ ಬೇಕೆಂಬ ನಿಯಮವಿದೆ.
ಅಷ್ಟಕ್ಕೂ ಇಲ್ಲಿನ ಬೀದಿ ನಾಯಿ ಸಂರಕ್ಷಣಾ ಹಾಗೂ ಚಿಕಿತ್ಸಾಲಯದಲ್ಲಿನ ಶ್ವಾನಗಳ ಆರೈಕೆ, ಊಟೋಪಚಾರಗಳಿಗೆ ಹಾಗೂ ಇದನ್ನು ನಿರ್ವಹಿಸುವ ಮಂದಿಗೆ ಭರಿಸುವ ವೇತನ ವೆಚ್ಚಗಳಿಗೆ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಬಿಡಿಗಾಸು ಧನ ಸಹಾಯ ಸಿಗುತ್ತಲೂ ಇಲ್ಲ. ಹಾಗೂ ನಾವು ಪಡೆಯುತ್ತಲೂ ಇಲ್ಲ ಎನ್ನುತ್ತಾರೆ. ಈ ಘಟಕದ ವ್ಯವಸ್ಥಾಪಕರು, ಸಮಾಜಸೇವಕಿ ಡೋಲ್ಮಾ ಅವರ ಸಂಭಾವನೆಯಿಂದಲೇ ಈ ಮಾನವೀಯ ಸೇವೆ ದೊರಕುತ್ತಿದೆ.
ಮನುಷ್ಯರಿಗಿಂತಲೂ ಉತ್ತಮ ಸ್ವಭಾವದ ಈ ಶ್ವಾನಗಳ ಆರೈಕೆ ಹಾಗೂ ಪೋಷಣೆಯಲ್ಲಿ ನಮಗೆ ಆತ್ಮತೃಪ್ತಿ ಸಿಗುತ್ತಿದೆ. ನಮ್ಮ ಈ ಸೇವೆ ಕಳೆದ ಮೂರು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಈ ಸೇವೆಯನ್ನು ಹೀಗೆಯೇ ಮುಂದುವರಿಸುತ್ತೇವೆ ಎನ್ನುತ್ತಾರೆ ಕೆಲ್ಸಂಜ್. ಏನೇ ಇರಲಿ. ನಿಯತ್ತಿನ ಈ ಮೂಕ ಪ್ರಾಣಿಗಳ ಸೇವೆ ನಿಜಕ್ಕೂ ಶ್ಲಾಘನೀಯವಾದುದು.
ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾವುಗಳು ನೆಮ್ಮದಿಯಿಂದ ಬೆಳಗ್ಗಿನ ವೇಳೆ ವಾಯು ವಿಹಾರಕ್ಕೂ ಹೋಗೋಕೆ ಆಗ್ತಾ ಇಲ್ಲ. ಇವುಗಳನ್ನು ಹಿಡಿದು ಕೊಲ್ಲಿರಿ ಎಂದು ಬೊಬ್ಬೆ ಹೊಡೆದು ಮೃಗೀಯತೆ ತೋರುವವರು ಒಮ್ಮೆ ಬೈಲಕೊಪ್ಪದ ಈ ಶಿಬಿರಕ್ಕೆ ಹೋಗಿ ಬಂದರೆ ಉತ್ತಮ. ಬೀದಿ ನಾಯಿಗಳು ಎಲ್ಲಿಯಾದರೂ ಗಾಯಗೊಂಡು ತ್ರಾಸ ಪಡುತ್ತಿರುವ ಚಿತ್ರಣ ಕಂಡು ಬಂದರೆ ಯಾರೇ ಆಗಲೀ ಈ ಚಿಕಿತ್ಸಾಲಯದ ವ್ಯವಸ್ಥಾಪಕರಿಗೆ ಒಂದು ಕರೆ ಮಾಡಿ ಆ ಅಮಾಯಕ ಜೀವವನ್ನು ಕಾಪಾಡಬಹುದು. ಬೀದಿ ನಾಯಿಗಳ ಸಂರಕ್ಷಣಾಲಯದ ಸಂಪರ್ಕ ಸಂಖ್ಯೆ 99458 04776 ಇಲ್ಲಿಗೆ ಸಂಪರ್ಕಿಸಬಹುದು.