ಪ.ಬಂ ಬರಾಕ್‌ಪುರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಭಾನುವಾರ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಬೆನ್ನಲ್ಲೇ ಕೇಸರಿ ಪಾಳಯದಲ್ಲಿ ಅಸಮಾಧಾನ ಉಂಟಾಗಿದೆ. “ಎಲ್ಲಾ ಚೆನ್ನಾಗಿದೆ” ಎಂದು ನಟಿಸುವ ಬದಲು ಲೋಪವನ್ನು ಸರಿಪಡಿಸುವ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ಸೋಮವಾರ ಪಕ್ಷದೊಳಗೆ ಆತ್ಮಾವಲೋಕನಕ್ಕೆ ಕರೆ ನೀಡಿದ್ದಾರೆ.
ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಬೇಸರ ಮತ್ತು ಬಂಗಾಳದಲ್ಲಿ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ಬರಾಕ್‌ಪುರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಭಾನುವಾರ ಬಿಜೆಪಿ ತೊರೆದು ಮತ್ತೆ ತಮ್ಮ ತವರು ಪಕ್ಷವಾದ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದರು.
“ಯಾರಾದರೂ ಪಕ್ಷ ತೊರೆದರೆ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೀವು ಹೇಳುತ್ತಲೇ ಇದ್ದರೆ, ಅದು ಸರಿಯಲ್ಲ. ಪಕ್ಷಕ್ಕೆ ನಿಜಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಜನರು ಏಕೆ (ಬಿಜೆಪಿ) ತೊರೆಯುತ್ತಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಜ್ರಾ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಬಂಗಾಳ ವಿಧನಾಸಭಾ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಇಲ್ಲಸಲ್ಲದ ಸಾಹಸ ಮಾಡುತ್ತಿದೆ. ಇಂತಹ ಸಮಯದಲ್ಲಿ ಹಿರಿಯ ಸ್ಥಾನದಲ್ಲಿರುವ ನಾಯಕರು ಪಕ್ಷ ಬಿಟ್ಟು ಹೋದರೆ ನಿಜಕ್ಕೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
“ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು, ಅದನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ. ‘ಎಲ್ಲಾ ಚೆನ್ನಾಗಿದೆ’ ಎಂಬ ವಿಧಾನವು ಸರಿಯಲ್ಲ” ಎಂದು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು. ಹಜ್ರಾ ಅವರ ಈ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಇನ್ನೂ ಪ್ರತಿಕ್ರಿಯಿಸಿಲ್ಲ.