ರಾಜ್ಯದಲ್ಲಿ ಪೂರ್ವ ಮುಂಗಾರು (Mansoon) ಮಳೆಯಬ್ಬರ ಜೋರಾಗೇ ಇದೆ. ಈಗಾಗಲೆ ಬೆಂಗಳೂರಿನಲ್ಲಿ (Bangalore) ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ (Orange alert) ಕೂಡ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಮುಂಜಾನೆಯಿಂದ ತಗ್ಗಿದ್ದ ಮಳೆಯಬ್ಬರ ಸಂಜೆಯಾಗುತ್ತಲೇ ಮತ್ತೆ ಶುರುವಾಗಿತ್ತು.ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಎಂಟ್ರಿ ಕೊಟ್ಟಿದ್ದ.ಕೆಲವು ಕಡೆ ಅವಾತರಗಳನ್ನೂ ಸೃಷ್ಟಿ ಮಾಡಿದ್ದ.
ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಕೊಂಚ ಜೋರಾಗಿಯೇ ಇದೆ. ಚಿಕ್ಕಮಗಳೂರು (Chikkamagalore) ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಾಗುಂಡಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳ ಮೇಲೆ ನೀರು ಹರಿದು ಬಂದಿತ್ತು ಮಾಗುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಬಿಸಿಲಿನಿಂದ ಕೆಂಗೆಟ್ಟಿದ್ದ ಹಾವೇರಿ (Haveri) ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಆದ್ರೆ, ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ಶಿಗ್ಗಾಂವ್ ಸವಣೂರು ತಾಲೂಕಿನಲ್ಲಿ ಹೊಲ-ಗದ್ದೆಗಳು ಜಲಾವೃತವಾಗಿದೆ. ವರುಣನ ಆರ್ಭಟಕ್ಕೆ ಚಿಕ್ಕಬಳ್ಳಾಪುರ (Vhikkaballapur) ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದಲ್ಲಿ ಜಲಪಾತವೇ ಸೃಷ್ಟಿಯಾಗಿದೆ.
ರಾಯಚೂರಿನ (Raichur) ಸಿಂಧನೂರು ನಗರದಲ್ಲಿ ಮಳೆಯಬ್ಬರ ಹೇಳತೀರದ್ದಾಗಿದೆ. ಧಾರಾಕಾರ ಸುರಿದ ಮಳೆಗೆ ರಸ್ತೆ ಮೇಲೆಯೇ ಮಳೆ ನೀರು ಹರಿದಿದೆ. ಮೊಳಕಾಲುದ್ದ ಹರಿದ ಮಳೆ ನೀರಿಗೆ ವಾಹನ ಸವಾರರು ಪರದಾಟ ನಡೆಸಿದ್ರು. ಕಲ್ಪತರು ನಾಡು ತುಮಕೂರಿನಲ್ಲಿ (Tumkur) ಸಂಜೆಯಾಗುತ್ತಿದ್ದಂತೆ ಮಳೆರಾಯ ಎಂಟ್ರಿ ಕೊಟ್ಟಿದ್ದ.. ಗುಡುಗು, ಸಿಡಿಲು, ಬಿರುಗಾಳಿ ಸಹಿತ ವರುಣ ಆರ್ಭಟಿಸಿದ್ದು, ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಸೇರಿದಂತೆ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ.

ಒಟ್ಟಾರೆ, ರಾಜ್ಯದ ಹಲವೆಡೆ ಈಗಾಗಲೆ ಉತ್ತಮ ಮಳೆಯಾಗ್ತಿದೆ.. ಪೂರ್ವ ಮುಂಗಾರಿನಲ್ಲಿ ಮಳೆರಾಯನ ಎಂಟ್ರಿಯಿಂದ ಜನ ಕೂಲ್ ಆಗ್ತಿದ್ದಾರೆ. ಇನ್ನೂ ಮುಂದುವರೆದು ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ.