ಒಡಿಶಾದಲ್ಲಿ ಇಬ್ಬರು ವ್ಯಕ್ತಿಗಳಿಗೆ ಹಂದಿ ಜ್ವರ (H1N1) ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
38 ವರ್ಷದ ಪುರುಷ ಮತ್ತು 28 ವರ್ಷದ ಮಹಿಳೆಗೆ ಎಚ್1ಎನ್1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಇಬ್ಬರೂ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ನಿರಂಜನ್ ಮಿಶ್ರಾ ತಿಳಿಸಿದ್ದಾರೆ.
ಇಬ್ಬರೂ ರೋಗಿಗಳಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದರು. ಸಾಮಾನ್ಯವಾಗಿ, ಮುಂಗಾರು ಪೂರ್ವ ಮತ್ತು ಚಳಿಗಾಲದ ಅವಧಿಯಲ್ಲಿ ವೈರಸ್ ಪತ್ತೆಯಾಗುತ್ತದೆ. ಕಳೆದ ವರ್ಷ, ಒಡಿಶಾದಲ್ಲಿ ಯಾವುದೇ ಹಂದಿ ಜ್ವರ ಪ್ರಕರಣಗಳು ವರದಿಯಾಗಿಲ್ಲವಾದರೂ, ವೈರಸ್ ಅಸ್ತಿತ್ವದಲ್ಲಿದೆ ಎಂದು ಮಿಶ್ರಾ ಹೇಳಿದರು.
2009 ರಲ್ಲಿ ಒಡಿಶಾದಲ್ಲಿ ಮೊದಲ ಹಂದಿ ಜ್ವರ ಪ್ರಕರಣ ವರದಿಯಾಗಿದ್ದು, 2017 ರಲ್ಲಿ 414 ಪಾಸಿಟಿವ್ ಪ್ರಕರಣಗಳು ಮತ್ತು 54 ಸಾವುಗಳು ವರದಿಯಾಗಿವೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ -19 ಅವಧಿಯಲ್ಲಿ ಅಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ನಂತರ ಒಡಿಶಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಕೇರಳದ ಇಬ್ಬರಲ್ಲಿ 12 ವರ್ಷದ ಒರ್ವ ಬಾಲಕಿ ಗುರುವಾರ ಈ ಕಾಯಿಲೆಗೆ ಬಲಿಯಾಗಿದ್ದಳು.
ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ, ಹಂದಿಜ್ವರ ಪ್ರಕರಣಗಳು ಮರುಕಳಿಸುತ್ತಿರುವುದು ಆರೋಗ್ಯ ಆಡಳಿತವನ್ನು ಸನ್ನದ್ಧ ಸ್ಥಿತಿಗೆ ತಳ್ಳಿದೆ. ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕರು ಹೇಳಿದರು.