ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಾರ್ಡ್‌ಗಳ ಮರು ವಿಂಗಡಣೆ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ 225 ವಾರ್ಡ್‌ಗಳು ಬರಲಿವೆ. ಹಿಂದಿನ ಬಿಜೆಪಿ ಸರ್ಕಾರ 198 ರಿಂದ 243 ಕ್ಕೆ ವಾರ್ಡ್‌ಗಳನ್ನು ಹೆಚ್ಚಿಸಲು ಬಯಸಿತ್ತು.
ನಗರಾಭಿವೃದ್ಧಿ ಇಲಾಖೆ ಮರು ವಿಂಗಡಣೆ ಕಾರ್ಯವನ್ನು ಮೇಲ್ವಿಚಾರಣೆ ಮಾಡಿದ್ದು, ಬಿಬಿಎಂಪಿ ಕೌನ್ಸಿಲ್‌ಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಪಾಲಿಕೆ ಅವಧಿಯು ಸೆಪ್ಟೆಂಬರ್ 10, 2020 ರಂದು ಕೊನೆಗೊಂಡಿತು.
ಆಗಸ್ಟ್ 18ರಂದು ವಾರ್ಡ್ ಮರುವಿಂಗಡನೆಯ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಸೆ.14ರಂದು ಪರಿಶೀಲನಾ ಸಮಿತಿ ಸಭೆ ನಡೆಸಿ ಜನರು ನೀಡಿದ ವಿವಿಧ ಸಲಹೆಗಳನ್ನು ಪರಿಗಣಿಸಿದ್ದು, ವಾರ್ಡ್‌ಗಳ ಮರು ವಿಂಗಡಣೆ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ.