ಹಿಂದಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಡಾಯ ಸಾಹಿತಿ, ಚಲನ ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ ನೀಡಿದ್ದು, ಹಿಂದಿ ಹೇರಿಕೆ ಪ್ರಯತ್ನಕ್ಕೆ ದೊಡ್ಡ ಇತಿಹಾಸವೇ ಇದೆ. ಎಲ್ಲ ಸರ್ಕಾರಗಳು ಆ ಕೆಲಸ ಮಾಡುತ್ತ ಬಂದಿವೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ, ಹಿಂದಿ ಹೇರಿಕೆ ಪ್ರಯತ್ನಕ್ಕೆ ದೊಡ್ಡ ಇತಿಹಾಸವೇ ಇದೆ. ಎಲ್ಲ ಸರ್ಕಾರಗಳು ಆ ಕೆಲಸ ಮಾಡುತ್ತ ಬಂದಿವೆ. ಹಿಂದಿ ಕೇಂದ್ರ ಸರ್ಕಾರದ ಎರಡು ಆಡಳಿತ ಭಾಷೆಗಳಲ್ಲಿ ಒಂದು. ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರ ಭಾಷೆ ಅಂತಾ ಕರೆದಿಲ್ಲ. ಯಾವ ಭಾಷೆಯನ್ನೂ ಸಂವಿಧಾನದಲ್ಲಿ ರಾಷ್ಟ್ರ ಭಾಷೆ ಅಂತಾ ಹೇಳಿಲ್ಲ. ಕನ್ನಡ ಒಳಗೊಂಡು ಎಲ್ಲ ಭಾಷೆಗಳೂ ರಾಷ್ಟ್ರದ ಭಾಷೆಗಳಾಗಿವೆ. ಹಾಗೆಯೇ ಹಿಂದಿಯೂ ಕೂಡ ರಾಷ್ಟ್ರದ ಒಂದು ಭಾಷೆಯಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಎಲ್ಲ ಮಾತೃಭಾಷೆಗೂ ಮೊದಲ ಮಹತ್ವ ಸಿಗಬೇಕು. ಸರ್ಕಾರಿ ಕಚೇರಿಗಳಲ್ಲಿನ ಹಿಂದಿ ಬಳಕೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅದಕ್ಕಾಗಿಯೇ ಒಂದು ಸಮಿತಿಯೂ ಇದೆ. ಆದರೆ ಇದು ಹಿಂದಿಗೆ ಮಾತ್ರ ಇರಬಾರದು. ಎಲ್ಲಾ ಭಾಷೆಗಳ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ನಡೆಯಬೇಕು. ಸರ್ವ ಭಾಷಾ ಸಮಾನತೆ ನಮ್ಮ ನೀತಿ ಆಗಬೇಕು. ಹಿಂದಿ ಕಲಿಕೆ ಬೇರೆ, ಹಿಂದಿ ಹೇರಿಕೆ ಬೇರೆ. ನಾನು ಹಿಂದಿ ಕಲಿಕೆಗೆ ವಿರೋಧಿಯಲ್ಲ. ಹಿಂದಿ ಹೇರಿಕೆಗೆ ವಿರೋಧಿ ಎಂದರು.

ಕೇಂದ್ರ ಸಚಿವ ಅಮಿತ್ ಷಾ, ಹಿಂದಿ ಬಳಕೆ ಬಗ್ಗೆ ಹೇಳಿರೋದು ಸರಿಯಲ್ಲ. ಈ ಬಗ್ಗೆ ಪ್ರತಿರೋಧ ಬಂದಾಗೆಲ್ಲ ಹಿಂದೆ ಸರಿಯುತ್ತ ಬಂದಿದ್ದಾರೆ. ಆದರೆ ಆ ಸಮಸ್ಯೆ ಜೀವಂತವಾಗಿ ಇಟ್ಟಿದ್ದಾರೆ. ಅದನ್ನು ಜೀವಂತವಾಗಿ ಇಡಬಾರದು. ಸರ್ವಭಾಷಾ ಸಮಾನತೆ ಒಕ್ಕೂಟ ಸರ್ಕಾರದ ನೀತಿ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿ ಹೇರಿಕೆ ಖಂಡಿತ ತಪ್ಪು. ಅದನ್ನು ನಾವು ಪ್ರತಿರೋಧಿಸುತ್ತೇವೆ. ಹಿಂದಿ ಹೇರಿಕೆ ಯಾವುದೇ ಸರ್ಕಾರ ಹೇಳಲಿ, ಆ ಪಕ್ಷದ ಸರ್ಕಾರವೇ ರಾಜ್ಯದಲ್ಲಿದ್ದರೂ ವಿರೋಧಿಸಬೇಕು. ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೂ ರಾಜ್ಯದ ಸರ್ಕಾರ ವಿರೋಧಿಸಲೇಬೇಕು. ಈಗ ಭಿನ್ನಭಿಪ್ರಾಯಗಳೆಲ್ಲ ಬೀದಿ ಜಗಳ ಆಗಿವೆ. ಹಾಗೆ ಆಗಬಾರದು. ಎಲ್ಲ ಭಾಷೆಗೂ ಸಮಾನತೆ ಸ್ಥಾನ ಕೊಡಿ ಅಂತಾ ಎಲ್ಲ ರಾಜ್ಯಗಳ ಸಿಎಂ ಹೇಳಬೇಕು. ಇನ್ನು ಈ ವಿಚಾರವಾಗಿ ಎಲ್ಲ ರಾಜ್ಯದ ಸಿಎಂಗಳು ಸಭೆ ಮಾಡಬೇಕು. ರಾಷ್ಟ್ರೀಯ ಭಾಷಾ ನೀತಿ ಬಗ್ಗೆ ಚರ್ಚೆ ಮಾಡುವ ಜೊತೆಗೆ ಎಲ್ಲ ಭಾಷೆಗಳ ಅಭಿವೃದ್ಧಿಗೆ ಆಗ್ರಹಿಸಿ ಒತ್ತಾಯ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.