ಬೆಂಗಳೂರು :- ಪ್ರಜ್ವಲ್ ರೇವಣ್ಣರ ವಿದೇಶಕ್ಕೆ ಹಾರಿ ಹೋಗಲು ಸಹಕಾರ ಕೊಟ್ಟಿದ್ದೇ ರಾಜ್ಯ ಸರ್ಕಾರ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮತದಾನ ಮಾಡಿದ ದಿನವೇ ಆತ ಹಾಸನದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿ, ಅಲ್ಲಿಂದ ವಿದೇಶಕ್ಕೆ ಹಾರಿದ್ದಾನೆ. ಅಂದಾಜು 300 ಕಿಮೀ ಆತ ಪ್ರಯಾಣ ಬೆಳೆಸಿದ್ದಾನೆ. ಇದಕ್ಕೆ ರಾಜ್ಯ ಸರ್ಕಾರವೇ ಸಹಕಾರ ಕೊಟ್ಟಿದೆ. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ಮತದಾನಕ್ಕೂ ನಾಲ್ಕೈದು ದಿನಗಳ ಮುಂಚೆಯೇ ಪೆನ್‌ಡ್ರೈವ್ ಪ್ರಕರಣ ಹೊರಗೆ ಬಂದಿದೆ. ಇದು ಎಲ್ಲೆಡೆ ವೈರಲ್ ಆಗಿದೆ. ಆಗ ಸರ್ಕಾರ ಏನು ಮಾಡುತ್ತಿತ್ತು? ಮೊದಲು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪ್ರಜ್ವಲ್ ರೇವಣ್ಣರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಬೇಕಿತ್ತು ಅಲ್ವಾ?
ಆತ ಮತದಾನ ಮಾಡಿದ್ದಾನೆ. ಬಳಿಕ ಹಾಸನದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ದೇವನಹಳ್ಳಿಯ ವಿಮಾನನಿಲ್ದಾಣಕ್ಕೆ ಪ್ರಯಾಣ ಬೆಳೆಸಿ, ಬಳಿಕ ಅಲ್ಲಿಂದ ವಿದೇಶಕ್ಕೆ ಹಾರಿದ್ದಾನೆ. ಇಷ್ಟೆಲ್ಲಾ ಮಾಡುವವರೆಗೂ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಎಂದು ಆರ್. ಅಶೋಕ್, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
