ಬೆಂಗಳೂರು : ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ನಡೆಸಿರುವ ರೋಡ್ ಶೋ ಕುರಿತಂತೆ ರಾಜ್ಯ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. ಇಂದು ನಡೆದ ರೋಡ್ ಶೋಗೆ ಸಿಕ್ಕ ಅನುಮತಿಯು ಪಕ್ಷಪಾತದ ರೀತಿಯಲ್ಲಿ ಕಂಡು ಬಂದಿದ್ದು ಇದು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಕ್ತವಾಗಿ ಹಾಗೂ ನ್ಯಾಯಯುತವಾಗಿ ನಡೆಸಲು ಅಡ್ಡಿಪಡಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ದೂರಿದೆ.
ಬೆಂಗಳೂರು ನಗರದಲ್ಲಿ ಫ್ಲೆಕ್ಸ್, ಮರುಬಳಕೆಯಾದ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಇವುಗಳನ್ನು ಬಳಕೆ ಮಾಡಲು ಬಿಜೆಪಿ ಅನುಮತಿ ಪಡೆದಿರೋದು ನಮ್ಮ ಗಮನಕ್ಕೆ ಬಂದಿದೆ. ಶನಿವಾರದಂದು ನಡೆದ ಬಿಜೆಪಿ ರೋಡ್ ಶೋನಲ್ಲಿ 6×4 ಅಡಿ ಎತ್ತರದ ಬ್ಯಾನರ್ಗಳನ್ನು ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಈ ಅನುಮತಿಗಳನ್ನು ಬಳಕೆ ಮಾಡಿಕೊಂಡು ಬಿಜೆಪಿಯು ರಾಜ್ಯ ರಾಜಧಾನಿಯ ಪರಿಸರ ಸೌಂದರ್ಯವನ್ನು ಹಾಳ ಮಾಡಿದೆ. ಅಲ್ಲದೇ ಸಂಪೂರ್ಣ ರ್ಯಾಲಿಯಲ್ಲಿ ಅನುಮತಿಗಿಂತ ಹೆಚ್ಚು ಫ್ಲೆಕ್ಸ್ಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ.
ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಗೆ ರ್ಯಾಲಿ ನಡೆಸಲು ಅನುಮತಿ ನೀಡುವ ಮೂಲಕ ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರೋದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಹೈಕೋರ್ಟ್ನ ಆದೇಶವನ್ನು ಮೀರಿ ಈ ರ್ಯಾಲಿಯನ್ನು ನಡೆಸಲಾಗಿದ್ದು ಚುನಾವಣಾ ಆಯೋಗ ಈ ಕೂಡಲೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಆಗ್ರಹಿಸಿದೆ