ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯ ಮಾಡಿ, ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಳಗಾವಿಯ ಪ್ರೆಸಿಡೆನ್ಸಿ ಕ್ಲಬ್‌ನಲ್ಲಿ ಸಭೆ ನಡೆಸಲಾಗಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಸಿ.ಸಿ.ಪಾಟೀಲ್, ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ, ಮೃಣಾಲ್ ಹೆಬ್ಬಾಳ್ಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಪಂಚಮಸಾಲಿ ಸಮಾಜದ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರುಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಲ್ಲಿ ಮಾತನಾಡಿ, ಡಿಸೆಂಬರ್ 10 ರಂದು ಪಂಚಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಿದೆ. ಕರೆದು ಮಾತನಾಡುವುದನ್ನು ಮಾಡದೆ, ಪೊಲೀಸರ ಮೂಲಕ ಟ್ರ್ಯಾಕ್ಟರ್ ತಡೆಯವ ಯತ್ನ ನಡೆದಿದೆ. ಯಾವುದೇ ಅನಾಹುತ ಆಗಬಾರದು ಅಂದ್ರೆ. ಸಿಎಂ ಹಿಂದುಳಿದ ಆಯೋಗದಿಂದ ವರದಿ ತರಿಸಬೇಕು. ಅದನ್ನು ಮೀಸಲಾತಿ ಗೆಜೆಟ್ ಹೊರಡಿಸಬೇಕು. ಸಮಾಜಕ್ಕೆ ನ್ಯಾಯ ಕೊಡಬಾರದು ಅನ್ನೋದು ಸರ್ಕಾರಕ್ಕೆ ಇದ್ರೆ. ಹೋರಾಟ ಅನಿವಾರ್ಯ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರು ಮಾತನಾಡುವ ದಾಟಿ ಬದಲಾವಣೆ ಆಗಿದೆ. ಈಗ ಅವರೇ ಪ್ರವಚನ ಹೇಳಲು ಆರಂಭ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‌ನ ಪಂಚಮಸಾಲಿ ಶಾಸಕರಿಗೆ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಂಡು ಸಭೆ ಮಾಡಿ, ನಮ್ಮದು ಯಾವುದೇ ಪ್ರತಿಷ್ಠೆ ಇಲ್ಲ. ಸಿದ್ದರಾಮಯ್ಯ ಹಾದಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡಬಾರದು. ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ಕೊಡದೇ ಇದ್ರೆ ಅಪಖ್ಯಾತಿ ಬರುತ್ತದೆ ಎಂದಿರುವ ಯತ್ನಾಳ್, ಪೊಲೀಸ್ ಇಲಾಖೆಯಿಂದ ನಮ್ಮ ಮುಖಂಡರಿಗೆ ಕರೆ ಮಾಡಿಸಬೇಡಿ. ಯಾರಿಗೂ ಕ್ರೆಡಿಟ್ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಶಾಸಕರು ಇದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು. ಆತ್ಮಸಾಕ್ಷಿ ಇರೋ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಧರಣಿ ಮಾಡಬೇಕು. ನಾನು ಸದನದಲ್ಲಿ ಮೀಸಲಾತಿ ವಿಚಾರ ಪ್ರಸ್ತಾಪ ಮಾಡ್ತಿವಿ. ಪದಾಧಿಕಾರಿಗಳಿಗೆ ಹೋರಾಟಕ್ಕೆ ಹೋಗದಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಇಂತಹ ಬೀಜಗಳು ಇವೆ. ಎಲ್ಲಿ ಪ್ರತಿಭಟನೆ ತಡೆಯುತ್ತಾರೆ ಅಲ್ಲಿಯೇ ಹೋರಾಟ ಮಾಡಬೇಕು. ನಾನು ಸಾಮಾನ್ಯ ಬಸವಣ್ಣ, ನಾನು ಶ್ರೀಕೃಷ್ಣ ಅಲ್ಲ. ನಾನು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಲ್ಲರೂ ಬರಬೇಕು. ಕಾಂಗ್ರೆಸ್ ಶಾಸಕರು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.