ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ ಫಲಿತಾಂಶ ಪ್ರಕಟ ಮಾಡಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಾಲಕಿಯರ ಮೇಲುಗೈ ಸಾಧಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು 8 ಲಕ್ಷದ 59 ಸಾವಿರದ 967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇಕಡ 65.90 ರಷ್ಟು (ಬಾಲಕರು – 2,87,416) ಬಾಲಕರು ಉತ್ತೀರ್ಣರಾಗಿದ್ದಾರೆ. ಇನ್ನು ಬಾಲಕಿಯರು ಶೇಕಡ 81.11 ರಷ್ಟು (ಬಾಲಕಿಯರು -3,43,788) ಉತ್ತೀರ್ಣ ಆಗಿದ್ದಾರೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್, SSLC ಬೋರ್ಡ್ ನಿರ್ದೇಶಕ ಗೋಪಾಲಕೃಷ್ಣ ಫಲಿತಾಂಶ ಪ್ರಕಟ ಮಾಡಿದ್ದಾರೆ. ಒಟ್ಟು 6,31,204 ವಿದ್ಯಾರ್ಥಿ ತೇರ್ಗಡೆ ಆಗಿದ್ದಾರೆ. ಒಬ್ಬರಿಗೆ ಪ್ರಥಮ ಸ್ಥಾನ ಸಿಕ್ಕಿದ್ದು 625ಕ್ಕೆ 625 ಅಂಕಗಳನ್ನೇ ಗಳಿಸಿದ್ದಾರೆ. ಇನ್ನುಳಿದಂತೆ 7 ಮಂದಿಗೆ ದ್ವಿತೀಯ ಸ್ಥಾನ (624), 14 ಮಂದಿಗೆ ತೃತೀಯ ಸ್ಥಾನ (623) ಗಳಿಸಿದ್ದಾರೆ. ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ನಗರ ಪ್ರದೇಶ 3.59 ಲಕ್ಷ ಮಂದಿ ಶೇ. 72.83 ರಷ್ಟು ಮಕ್ಕಳು ಉತ್ತೀರ್ಣ ಆಗಿದ್ದಾರೆ. ಗ್ರಾಮೀಣ ಭಾಗದ 2.71 ಲಕ್ಷ ಮಂದಿ ಶೇ. 74.17 ರಷ್ಟು ಮಕ್ಕಳು ತೇರ್ಗಡೆ ಆಗಿದ್ದಾರೆ. ಸರ್ಕಾರಿ ಶಾಲೆಯ 2.43 ಲಕ್ಷ ಮಂದಿ ಶೇ. 72.46 ರಷ್ಟು, ಅನುದಾನಿತ 1.50 ಲಕ್ಷ ಮಂದಿ ಶೇ. 72.22 ರಷ್ಟು, ಅನುದಾನ ರಹಿತ 2.23 ಲಕ್ಷ ಮಂದಿ ಶೇ. 86.46 ರಷ್ಟು ಮಕ್ಕಳು ಪಾಸ್ ಆಗಿದ್ದಾರೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಅಂದರೆ ಒಬ್ಬರೇ ಒಬ್ಬರೂ ಸಹ ಪಾಸ್ ಆಗದಿರುವ ಶಾಲೆಗಳು ಇವೆ.
ಬಾಗಲಕೋಟೆಯ ಅಂಕಿಯ ಬಸಪ್ಪ ಕೊಣ್ಣೂರ್ 625ಕ್ಕೆ 625 ಅಂಕಗಳನ್ನು ಗಳಿಸಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾಳೆ. ಮೊರಾರ್ಜಿ ದೇಶಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಆಗಿದ್ದಾಳೆ. ಮೊಧೋಳದ ಮೆಲ್ಲಿಗೇರಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಓದಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸಾಧನೆಗೈದಿದ್ದಾಳೆ. ರಾಜ್ಯದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಶೇ. 94, ದಕ್ಷಿಣ ಕನ್ನಡಕ್ಕೆ ದ್ವೀತಿಯ ಸ್ಥಾನ ಶೇ. 92.12, ಶಿವಮೊಗ್ಗಕ್ಕೆ ತೃತೀಯ ಸ್ಥಾನ ಶೇ. 88.67 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಕೊನೆಯ ಸ್ಥಾನ ಶೇ. 50.59 ರಷ್ಟು ಫಲಿತಾಂಶ ಪಡೆದ ಯಾದಗಿರಿ ಪಾಲಾಗಿದೆ.
ಕೃಷ್ಣಮಣಿ