ಲಾಕ್ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮತ್ತೆ ನಡೆಸಲು ರಾಜ್ಯ ಶಿಕ್ಷಣ ಸಚಿವರು ಭಾರೀ ಉತ್ಸುಕತೆ ತೋರುತ್ತಿದ್ದಾರೆ. ಈ ಕುರಿತು ಪೋಷಕರು, ಅಧ್ಯಾಪಕರು ಆತಂಕಗೊಂಡಿದ್ದರೂ, ವಿದ್ಯಾರ್ಥಿಗಳಿಗೆ ಅಪಾಯವುಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.
ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದು ಮಾಡಿ ಆಂತರಿಕ ಮೌಲ್ಯಮಾಪನಕ್ಕೆ ತಕ್ಕಂತೆ ಶ್ರೇಣಿ ನೀಡುವುದಾಗಿ ಆದೇಶ ಮಾಡಿತ್ತು. ಆ ಹಿನ್ನೆಲೆಯಲ್ಲಿ ಕರ್ನಾಟಕವೂ ಅದೇ ಮಾದರಿಯನ್ನು ಅನುಸರಿಸಬೇಕೆಂಬ ಪೋಷಕರು ಹಾಗೂ ಶಿಕ್ಷಕರು ಬಯಸಿದ್ದರು.
Also Read: ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
ಆದರೆ ಅದಮ್ಯ ವಿಶ್ವಾಸದಿಂದ ರಾಜ್ಯ ಶಿಕ್ಷಣ ಸಚಿವರು ಜೂನ್ 25ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವಾದಾಗಿ ತೀರ್ಮಾನಿಸಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು. ಕರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದು ಪೋಷಕರನ್ನು ಆತಂಕಕ್ಕೀಡು ಮಾಡಿತ್ತು. ಸದ್ಯ ಇಲಾಖೆಯ ಈ ನಿಲುವಿಗೆ ವಿರೋಧ ವ್ಯಕ್ತ ಪಡಿಸಿ ಶಿಕ್ಷಣ ಸಚಿವರ ಮೇಲೆ ದೂರು ದಾಖಲಿಸಲಾಗಿದೆ.
Also Read: SSLC ಪರೀಕ್ಷೆ ರದ್ದುಗೊಳಿಸಿದ ತಮಿಳುನಾಡು, ತೆಲಂಗಾಣ
ಜನಾಧಿಕಾರ ಸಂಘರ್ಷ ಪರಿಷತ್ನಿಂದ ಕರ್ನಾಟಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಹಲಸೂರು ಗೇಟ್ ಪೋಲಿಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಎಸ್ಎಸ್ಎಲ್ಸಿ(S.S.LC) ಮತ್ತು ಪಿಯುಸಿ (P.U.C) ವಿದ್ಯಾರ್ಥಿಗಳಿಗೆ ಬಲವಂತವಾಗಿ ಪರೀಕ್ಷೆಗಳನ್ನು ನಡೆಸಿ ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತರೂ, ಜನಾಧಿಕಾರ ಸಂಘರ್ಷ ಪರಿಷತ್ ಅಧ್ಯಕ್ಷರೂ ಆಗಿರುವ ಆದರ್ಶ್ ಅಯ್ಯರ್, ಮೇ 18 ರಂದು ಸಭೆ ಕರೆದು ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಪರೀಕ್ಷೆ ನಡೆಸಬೇಕಾದ ಬೋರ್ಡ್ ಮೆಂಬರ್ಗಳ ಸಹಿಯಿಲ್ಲದೆ, ತಾವು ಒಬ್ಬರೇ ಸಹಿ ಮಾಡಿ ತೀರ್ಮಾನ ಕೈಗೊಂಡಿದ್ದಾರೆ. ಇದು ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಕೆಲಸ ಮಾಡಬೇಕಿರುವುದು ಪರೀಕ್ಷಾ ಮಂಡಳಿ, ಸಚಿವರ ಅಧಿಕಾರ ವ್ಯಾಪ್ತಿಯಲ್ಲಿ ಇದು ಒಳಪಡುವುದಿಲ್ಲವಾದ್ದರಿಂದ ಸಚಿವರ ಮೇಲೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ.
Also Read: ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾ ಹಠಮಾರಿ ಸರ್ಕಾರ..?
ಅಲ್ಲದೆ ಕರ್ನಾಟಕ ಶಿಕ್ಷಣ ಕಾಯ್ದೆ 22 ನೇ ಸೆಕ್ಷನ್ ಪ್ರಕಾರ ಇಂಟರ್ನಲ್ ಅಸೆಸ್ಮೆಂಟ್ ಮಾರ್ಕ್ ನೋಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬಹುದು ಅನ್ನುವ ಕಾನೂನಿದೆ. ಮಾಡೆಲ್ ಮಾಡ್ತೀವಿ ಎಂದು ಆ ಕಾನೂನನ್ನು ಬದಿಗಿಟ್ಟು ಮಕ್ಕಳ ಬದುಕನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ, ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ ಹಾಗಿದ್ದ ಮೇಲೆ ಕರ್ನಾಟಕದಲ್ಲಿ ಯಾಕೆ ಕಷ್ಟ ಎಂದು ಅಯ್ಯರ್ ಪ್ರಶ್ನಿಸಿದ್ದಾರೆ.

ಪೋಲಿಸರು ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣ ದಾಖಲಾಗದಿದ್ದರೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪ್ರಕರಣ ದಾಖಲಿಸುವುದಾಗಿ ಆದರ್ಶ್ ಅಯ್ಯರ್ ಹೇಳಿದ್ದಾರೆ.
ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ರನ್ನು ಪ್ರತಿಧ್ವನಿ ತಂಡವು ಫೋನ್ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆಯನ್ನು ಸ್ವೀಕರಿಸಲಿಲ್ಲ.